ಶುಕ್ರವಾರ, ಅಕ್ಟೋಬರ್ 12, 2012


ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
  • ನಗೆ ಯಾರಪ್ಪನ ಆಸ್ತಿಯೂ ಅಲ್ಲ. ಅದನ್ನಾವ ಲಕ್ಷ್ಮೀಪುತ್ರನೂ ಗುತ್ತಿಗೆ ಹಿಡಿದಿಲ್ಲ.
  • ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿರುವವರಲ್ಲಿ ಆಳುವವರೇ  ಹೆಚ್ಚು.
  •  ಸುಖ ಪಡುವುದರಲ್ಲಿ ಅಷ್ಟು ಸುಖವಿಲ್ಲ. ಕಷ್ಟದಲ್ಲಿರುವಾಗ ಆಗುವ ಸುಖದ ನೆನಪು ಹೆಚ್ಚಿನ ಸುಖ.
  • ಇನ್ನೊಬ್ಬರ ಮನಸ್ಸನ್ನು ಓದಲು ಬರುವಂತಿದ್ದರೆ ಈ ಜಗತ್ತಿನ ಕಥೆಯೇ ಬೇರೆಯಾಗುತ್ತಿತ್ತು ಪ್ರಾಯಶಃ.
  • ಜೇಲಿನಲ್ಲಿರುವವರೆಲ್ಲರೂ ಕಳ್ಳರು, ಆದರೆ ಹೊರಕ್ಕಿರುವವರೆಲ್ಲರೂ ಸುಸಂಪನ್ನರೆ? ಗರ್ಭಿಣಿಯಾದ ವಿಧವೆ ಮಾತ್ರವೇ ವ್ಯಭಿಚಾರಿಣಿ ಈ ಧೃತರಾಷ್ಟ್ರ ಸಮಾಜದ ಗಜುಗ ಕಂಣಲ್ಲಿ.
  • ವ್ಯಕ್ತಿಗೆ ವ್ಯಕ್ತಿ ನಮಸ್ಕಾರ  ಅನ್ನುವುದು ಒಂದು ಸುಸಂಸ್ಕೃತಿಯ ಕುರುಹು. ಸ್ಥಾನ, ಮಾನ ಇವೆಲ್ಲವೂ ಸಾಮಾನ್ಯ ದಡ್ಡರಿಗಷ್ಟೇ.
  • ದೇವನ ಸಹಾಯವನ್ನೂ ಎಡಕಾಲಿನಿಂದ ಒದೆಯುವ ಮನೋದಾರ್ಡ್ಯ (ದೊಡ್ಡ ಡ ಎಂದು ಓದಿಕೊಳ್ಳಿ) ಉಳ್ಳವನೇ ನನ್ನ ದೃಷ್ಟಿಯಲ್ಲಿ ದೇವರು.
ಇಂದಿಗಿಷ್ಟು. ಇನ್ನು ನನ್ನದೊಂದು ಮುಕ್ತಕ.
ನೀತಿ 
ಅತಿಯಾಗಿ ಉರಿದರೆ ಅತಿ ಬೇಗ ಆರುವೆ 
ಮದ್ಯಸಾರದ ಉರಿಯ ರೀತಿ.
ಮಿತಿಯಿಂದ ಇದ್ದರೆ ಬಹುಕಾಲ ಬಾಳುವೆ 
ಹರಳೆಣ್ಣೆ ದೀಪದ ನೀತಿ.

ಸೋಮವಾರ, ಅಕ್ಟೋಬರ್ 8, 2012

ಶುಕ್ರವಾರ, ಅಕ್ಟೋಬರ್ 5, 2012

ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ :9845264304)
  • ಗಂಟೆ ಆರೋ, ಒಂಬತ್ತೋ, ಹನ್ನೊಂದೋ ಆಗಿರಬೇಕು. ಪಿಂಚಿನಿ  ಪುರುಷನಿಗೆ ಈ ಮೂರೂ ಒಂದೇ ತಾನೆ?  ಬೇಗ ಎದ್ದರೆ ಲಾಭವಿಲ್ಲ, ತಡವಾಗಿ ಎದ್ದರೆ ನಷ್ಟವಿಲ್ಲ.
  • ಟೆಲಿಫೋನು ಒಂದು ದುಬಾರಿ ಶತ್ರು. ನಮಗೆ ಯಾರು ಬೇಕೋ ಅವರು ಸಿಕ್ಕುವುದಿಲ್ಲ. ಯಾರು ಬಹಳ ಬೇಡವೋ ಅವರ ಕೈಗೆ ನಾವು ಸಿಕ್ಕಿಬೀಳುತ್ತೇವೆ.
  • ಟೆಲಿಫೋನು ಸುಮ್ಮನಾಯಿತೆಂದು ಸಂತೋಷಪಡುವವನು ದಡ್ಡ. ಅದು ಸುಮ್ಮನಾಗುವುದು ಮತ್ತೆ ಬಾರಿಸಲಿಕ್ಕೇ.
  • ಯಾರಾದರೂ ನಾವಿಲ್ಲದಾಗ ಮನೆಗೆ ಬಂದು, ಬಂದೊಡನೆ ಅವರನ್ನು ಕಾಣಲು ಹೇಳಿ ಹೋದರೆ ಒಂದೇ ಅರ್ಥ ಕೆಲಸ ಅವರದು-ನಮ್ಮದಲ್ಲ, ನಮಗೆ ಹಣ ಕೊಡುವವರು ಉಪಕಾರ ಮಾಡುವವರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆಯೇ?
  • ಡಿಗ್ರಿ ಬೇರೆ. ನಡತೆ ಬೇರೆ. ಇದಕ್ಕೂ ಅವಕ್ಕೂ ಸಂಬಂಧವೇ ಇಲ್ಲ.
  • "ಹೌದು, ಸರಕಾರಿ ಕೆಲಸದಲ್ಲಿ ಇವೆಲ್ಲ ಶ್ರಾದ್ಧ ನಿಯಮಗಳಿದ್ದಂತೆ. ಮಾಡದಿದ್ದರೆ ತಪ್ಪು; ಮಾಡಿದರೆ ಪ್ರಯೋಜನವಿಲ್ಲ"
ಇಂದಿಗಿಷ್ಟು. ಇನ್ನು ಸೋಮವಾರ. ಈಗ ನನ್ನ ಒಂದು ಮುಕ್ತಕ.
ಹದ್ದಿಗೆ 
ಆಕಾಶದೆತ್ತರ ಹಾರಾಡುತಿದ್ದರು 
ನೀನರಸುವುದೊಂದು ಹೆಣವ.
ಹದ್ದೆ ನಿನ್ನಂತೆಯೆ ಕೆಲರು ಮೇಲೇರುವ 
ರರಸಲು ಪರರವಗುಣವ.
                                                          **********

ಬುಧವಾರ, ಅಕ್ಟೋಬರ್ 3, 2012

ಬೀchi ಯವರ `ಆಟೋ' ಕಾದಂಬರಿಯಿಂದ.....
(ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)

  • "ಬಳ್ಳಾರಿಯ ಬ್ರಾಹ್ಮಣರು ಬಾಳೆಯ ಎಲೆಯಲ್ಲಿ ಉಂಡಂತೆ" ಎಂದೊಂದು ಮಾತು ಚಲಾವಣೆಯಲ್ಲಿದೆ ಆ ಭಾಗದಲ್ಲಿ. ನಾಳೆಗೆ ಕೆಟ್ಟು ಹೋಗಬಹುದಾದ್ದನ್ನು ಅಂದರೆ ಸಾಕಷ್ಟು ಬಾಡಿದ ಎಲೆಯನ್ನೇ, ಇಂದು ಉಪಯೋಗಿಸುವುದು. ನಾಳೆಯೂ ಮತ್ತೆ ಇದೆ ಕತೆಯೇ! ಅಂತೂ ಒಳ್ಳೆಯ ಎಲೆಯಲ್ಲಿ ಉಂಣುವುದು ಇವರ ಹಣೆಯಲ್ಲಿಯೇ ಇಲ್ಲ. ನಾಳೆಗೆ ಕೆಡುವ ಮತ್ತು ಇಂದು ಬಾಡಿದ ಎಲೆ ತಪ್ಪಿದರಲ್ಲವೆ, ಆ ಪ್ರಾಣಿ ಎಂದಾದರೂ ಒಳ್ಳೆಯ ಹೊಚ್ಚ ಹಸಿರು ಎಲೆಯನ್ನು ಹಾಸಿ ಉಂಣಬೇಕು?
  • ಓರ್ವ ಜಾಣನ ಮುಖಕ್ಕೆ ಆರತಿ ಎತ್ತಲು ನೂರೆಂಟು ಬಡಪಾಯಿ ಬಕರಾಗಳು ಗುಂಪು ಕಟ್ಟಬೇಕು.
  • ಜೀವನದಲ್ಲಿ ಆಶಾಭಂಗವನ್ನು ತಪ್ಪಿಸಿಕೊಳ್ಳಲು ಒಂದೇ ಉಪಾಯ. ಯಾವುದನ್ನೂ ಆಶಿಸಲೇಬಾರದು?
  • ಲೋಕದ ರೀತಿಯೇ ಹೀಗೆ-ಕಾಲಿನಿಂದ ಒದೆಯುವವನನ್ನು ಕಂಡು ಕೈ ಮುಗಿಯುತ್ತದೆ, ಕೈ ಮುಗಿಯುವವನ ತಲೆಯ ಮೇಲೆ ಕಾಲಿಡುತ್ತಾ  ನಡೆಯುತ್ತದೆ.
ಇಲ್ಲಿಗೆ `ಆಟೋ'ದಿಂದ ಆಯ್ದದ್ದು ಆಯಿತು. ಇನ್ನು ಶುಕ್ರವಾರ. ಈಗ ನನ್ನದೊಂದು ಮುಕ್ತಕ.
ಸುಭಾಷಿತ 
ಅಕ್ಷರಗಳು ಸಮ ಸಮನಾಗಿ ಇರಬೇಕು 
ಉರುಟು ದೃಢತೆ ಬೇಕು ಮತ್ತೆ.
ಒಂದಕೊಂದಕೆ ಅವು ಮುಟ್ಟದಂತಿರಬೇಕು 
ತರುಣಿಯ ಕುಚಯುಗ್ಮದಂತೆ!
                                                       **********

ಸೋಮವಾರ, ಅಕ್ಟೋಬರ್ 1, 2012

ಬೀchi ಯವರ `ಆಟೋ' ಕಾದಂಬರಿಯಿಂದ.....
(ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)
  • ಕಂಣೀರು  ಸುರಿಸುವುದೊಂದೇ ಹೆಂಣಿನ ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳೂ ಬರೀ ಅದನ್ನೇ ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನೂ ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿಬಿಡುತ್ತಿದ್ದವು.
  • ಹೊಟ್ಟೆಯ ಹಸಿವು ಬಾಳಿನ ಯಾವ ದುಃಖಕ್ಕೂಸೊಪ್ಪು  ಹಾಕುವುದಿಲ್ಲ.
  • "ನಿನ್ನ ಕಷ್ಟ, ನಿನ್ನ ಸುಖ ನಿನ್ನವು. ನನಗೆ ಕೊಡಬೇಕಾದುದನ್ನು ಮೊದಲು ಕೊಡು." ಎನ್ನುತ್ತದೆ ಹೊಟ್ಟೆ, ಟ್ಯಾಕ್ಸ್ ಇನ್ಸ್ ಪೆಕ್ಟರನಂತೆ. ಕೊಡಬೇಕು ಅಹುದು. ಆದರೆ ಎಲ್ಲಿಂದ? ಅದು ಹೊಟ್ಟೆಗೆ ಸಂಬಂಧಿಸದ ಪ್ರಶ್ನೆ.
  • ಎಲ್ಲಿಂದ ತಂದು ಹಾಕಿದರೂ ಅದು ತಿನ್ನುತ್ತದೆ. ಅದಕ್ಕೆ ನಿಯಮ, ನಿಯತ್ತುಗಳ ಕಾಟ ಒಂದೂ ಇಲ್ಲ. ಕಳ್ಳನ ಹೊಟ್ಟೆ ಅವನ ಅನ್ನ ಬೇಡ ಎನ್ನುವುದಿಲ್ಲವಲ್ಲ? ಬೇಡ ಎನ್ನದಿರುವುದಷ್ಟೇ ಅಲ್ಲ, ಅವನನ್ನು ಕಳ್ಳತನಕ್ಕೆ ಹಚ್ಚುವುದೇ ಆ ಹೊಟ್ಟೆ. ಅದಕ್ಕೇನು? ಅವನು ಜೇಲಿನಲ್ಲಿದ್ದರೂ ಅಲ್ಲಿಯೂ ಅದನ್ನು ಯಾರೋ ತುಂಬುತ್ತಾರೆ. ಅಂತೂ ತುಂಬುತ್ತಿರಬೇಕು ಅದನ್ನು ಆಗಾಗ್ಗೆ.
  • ತಂದೆ ಒಂದು ತಪ್ಪು ಮಾಡುತ್ತಾನೆ, ಮಗನು ಅದರಿಂದ ಸಹಜವಾಗಿಯೇ ಪಾಠ ಕಲಿಯುತ್ತಾನೆ. ತತ್ಫಲವಾಗಿ ಆ ತಪ್ಪನ್ನು ಬಿಟ್ಟು ಬೇರೊಂದು ಹೊಸತನ್ನು ಇವನು ಮಾಡುತ್ತಾನೆ!
  • ಆದರ್ಶವು ತಲೆಯನ್ನೊಯ್ದು ಆಕಾಶದಲ್ಲಿಡುತ್ತದೆ. ಬಾಳು ಕಾಲನ್ನು ನೆಲಕ್ಕೆ ತಂದು ನಿಲ್ಲಿಸುತ್ತದೆ.
  • ನಾಳೆಗೆ ಅಂಜುವ ಹೇಡಿಯೊಬ್ಬನು ಬೇಡವೆಂದರೆ ಬೆಳಗಾಗದೆ ಇರಲು ಆಗುತ್ತೆಯೇ?
ಇಂದಿಗೆ ಇಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ.
ಧಾಟಿ ತಿಳಿಯಲು, ದಪ್ಪಗಾ-ಜಿನಒಂದು -ಕನ್ನಡಕ-ಕಳೆದಿದೆ-ಸಿಕ್ಕಿದ-ವರುದಯ-ಮಾಡಿ, ಪತ್ರಿಕೆ-ಯಲಿದಪ್ಪ-ದಪ್ಪಅ-ಕ್ಷರಗಳ-ಪ್ರಕಟಣೆ-ಯೊಂದನು-ನೀಡಿ  ಹೀಗೆ ಪದಚ್ಛೆeದ ಮಾಡಿಕೊಂಡು ಒಮ್ಮೆ  ಓದಿ. 
ಪ್ರಕಟಣೆ 
ದಪ್ಪ ಗಾಜಿನ ಒಂದು ಕನ್ನಡಕ ಕಳೆದಿದೆ 
ಸಿಕ್ಕಿದವರು ದಯಮಾಡಿ 
ಪತ್ರಿಕೆಯಲಿ ದಪ್ಪದಪ್ಪ ಅಕ್ಷರಗಳ 
ಪ್ರಕಟಣೆಯೊಂದನು ನೀಡಿ.  
                                                   *****