ಬುಧವಾರ, ಅಕ್ಟೋಬರ್ 24, 2012

ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
  • ಉಪದೇಶ ಕೊಡುವ ಧಾರಾಳತೆಗೆ ನಮ್ಮ ಜನತೆಯಲ್ಲಿ ಕೊರತೆಯೇ?  ಮಾಡು ಇಲ್ಲವೇ ಉಪದೇಶ ಮಾಡು ಎಂಬುದೇ  ನಮ್ಮ ತತ್ವ ಅಲ್ಲವೇ?
  • ಆದರೆ ತಲೆ ಮಾತ್ರವೇ ಮನುಷ್ಯನಲ್ಲವಲ್ಲಾ? ಹೃದಯವೆಂಬುದೂ ಒಂದಿರುತ್ತದೆ ಸ್ವಾಮಿ!
  • ಹೃದಯಕ್ಕೆ ತಲೆ ಇಲ್ಲ, ತಲೆಗೆ ಹೃದಯವಿಲ್ಲ, ಆದರೆ ಈ ಎರಡೂ ಮಾನವನಿಗಿರುತ್ತವೆ.
  • ಅಧಿಕಾರವೆಂದರೇನು? ಅದೊಂದು ದೇವನ ಹೆಂಡ. ಅದರ ಅಮಲಿನಲ್ಲಿ ಎಲ್ಲವನ್ನೂ ಮರೆಯುತ್ತಾರೆ.
  • ತಂದೆ ತಾಯಿಗಳು ಮಕ್ಕಳನ್ನು ಕೆಡಿಸುವುದಕ್ಕೆ ಎರಡು ಆಯುಧಗಳಿವೆ-ಒಂದು ಬೆತ್ತ, ಇನ್ನೊಂದು ಅತಿ ಪ್ರೀತಿ. ಈ ಎರಡನ್ನೂ ಸಮಯೋಚಿತವಾಗಿ ಉಪಯೋಗಿಸಿದರೆ ಮಕ್ಕಳು ಚೆನ್ನಾಗಿಯೇ ಆಗುತ್ತವೆ, ಒಳ್ಳೆಯ ಪ್ರಜೆಯಾಗಿ ಬಾಳುತ್ತವೆ ಕೂಡ.
  • "ನಾನು ದೇವರನ್ನು ನಂಬುವುದಿಲ್ಲ. ಆದರೆ ದೈವೀ ಪ್ರತೀಕಾರವೆಂಬುದಂತೂ ಇದ್ದೇ ಇದೆಯಲ್ಲ!"
ಮುಕ್ತಕ.
ಸುಭಾಷಿತ 
ಅತಿಯಾದ ಬಳಕೆಯು ಬೆಲೆಯನು ಕಳೆವುದು 
ಇದಕೊಂದು ಸಾಮತಿಯಿಹುದು.
ಮಲಯ ಪರ್ವತದಲ್ಲಿ ಚಂದನ ವೃಕ್ಷವು 
ಭಿಲ್ಲರ ಒಲೆಯುರಿಸುವುದು.
                                                        **********

    ಸೋಮವಾರ, ಅಕ್ಟೋಬರ್ 22, 2012


    ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
    (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
    • ಡಾಕ್ಟರ್ ಜಿ. ರಾಂಕ್ ಎಂಬ ಮಾನಸ ಶಾಸ್ತ್ರಜ್ಞ ಈ ಜಾತಿ ಪದ್ಧತಿಯಿಂದ ಮಾನವನ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳ ಒಂದು ಯಾದಿಯನ್ನೇ ಸಿದ್ಧಪಡಿಸಿದ್ದಾನೆ.
    • ಜಾತಿ ಒಂದು ಅಗ್ಗದ ಅಫೀಮು.
    • ತನ್ನ ಬಗ್ಗೆ ಏನನ್ನೂ ಹೇಳಿಕೊಳ್ಳಲು ಇಲ್ಲದವನು ತನ್ನ ಜಾತಿಯನ್ನು ಹೇಳಿಕೊಳ್ಳುತ್ತಾನೆ.
    • ಯಾವನೂ ತನ್ನ ಜಾತಿಗಾಗಿ ನಾಚಿಕೆ ಪಡಬೇಕಾಗಿಲ್ಲ. ಅಂತೆಯೇ ಯಾವನೂ ಹೆಮ್ಮೆಪಟ್ಟುಕೊಳ್ಳಬೇಕಿಲ್ಲ.ಅದಕ್ಕವನು ಜವಾಬ್ದಾರನಲ್ಲವಲ್ಲ?
    • ತಪ್ಪು ಮಾಡಿದವನು ಕ್ಷಮಾಪಣೆ ಬೇಡುವುದರಲ್ಲಿ ನಾಚಿಕೆ ಏಕೆ? ತಪ್ಪನ್ನೊಪ್ಪಿಕೊಂಡು ಕ್ಷಮಾಪಣೆ ಬೇಡುವುದು ಸುಸಂಸ್ಕೃತ ಮನುಷ್ಯನ ಮೊಟ್ಟ ಮೊದಲ ಲಕ್ಷಣ.
    • ಜಾತಿಗೆ ಬೆಲೆ ಇದೆ, ನೀತಿಗೆ ಬೆಲೆ ಇಲ್ಲ. ಹಣಕ್ಕೆ ಬೆಲೆ ಇದೆ, ಗುಣಕ್ಕೆ ಬೆಲೆ ಇಲ್ಲ. ಮೌಢ್ಯತೆಗೆ ಬೆಲೆ ಇದೆ, ವಿವೇಚನೆಗೆ ಬೆಲೆ ಇಲ್ಲ-ಇದು ನಮ್ಮ ಸಮಾಜ.
    • ಜೇಲು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿ ನೂರೆಂಟು ಜಾತಿಗಳ ಜಂಜಾಟವಿಲ್ಲ. ಮೇಲ್ಜಾತಿ, ಕೀಳ್ಜಾತಿ ಎಂಬ ಅಯೋಗ್ಯ ಮತ್ತು ದಡ್ಡ ಕಲ್ಪನೆಗಳಿಲ್ಲ. ಎಲ್ಲರೂ ಒಂದೇ ಜಾತಿ. ನೀವು ಹೊರಗಡೆ ಇನ್ನೂ ಕನಸು ಕಾಣುತ್ತಿರುವ ಜಾತ್ಯತೀತ ಸಮಾಜ ಇಲ್ಲಿ ಎಂದೋ ಹುಟ್ಟಿದೆ.
    ಶುಕ್ರವಾರದ ಮುಕ್ತಕದ ಒಗಟು: ಮೊದಲ ಮೂರು ಪ್ರಶ್ನೆಗಳಿಗೆ ಕೊನೆಯ ಸಾಲಿನಲ್ಲಿರುವ ಮೂರು ಶಬ್ದಗಳೇ ಕ್ರಮವಾಗಿ ಉತ್ತರ!
    ಇನ್ನು ಮುಂದಿನ ಮುಕ್ತಕ. ಧಾಟಿ ಹಿಡಿಯಲು  ಏನಯ್ಯ  ನೀಕೊಟ್ಟ  ಚಾಕಪ್ಪಿ ನೊಳಗೊಂದು  ನೊಣಬಿದ್ದು  ಸತ್ತಿದೆ  ಮಾಣಿ ಹೀಗೆ ಬಿಡಿಸಿ ಒಮ್ಮೆ ಓದಿಕೊಳ್ಳಿ.
    ಹೋಟೆಲಿನಲ್ಲಿ 
    "ಏನಯ್ಯ, ನೀ ಕೊಟ್ಟ ಚಾಕಪ್ಪಿನೊಳಗೊಂದು 
    ನೊಣ ಬಿದ್ದು ಸತ್ತಿದೆ ಮಾಣಿ"
    "ಚಾ ಒಳ್ಳೆ ಬಿಸಿಯುಂಟು ನೊಣ ಬಿದ್ದರದರಲ್ಲಿ 
    ಬದುಕಿರಲಾರದು ಕಾಣಿ!"
                                                                      ************

    ಶುಕ್ರವಾರ, ಅಕ್ಟೋಬರ್ 19, 2012


    ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
    (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
    • ನಿಮ್ಮ ಜಾತಿ ಯಾವುದು? ಎಂದು ಯಾರನ್ನೇ ಆಗಲಿ ಕೇಳುವುದು ಒಳ್ಳೆಯ ಅಭಿರುಚಿಯಲ್ಲ ಮಾತ್ರವಲ್ಲ, ಇದು ಶುದ್ಧ ಮತ್ತು ಸ್ಪಷ್ಟವಾದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. 
    • ಜಾತಿ ಎಂಬುದು ಮುಖ್ಯವಲ್ಲ. ಒಂದು ಜಾತಿಯಲ್ಲಿ ಹುಟ್ಟಲು ಯಾರೂ ದೊಡ್ಡದಾಗಿ ತಪಸ್ಸು ಮಾಡಿ ಹುಟ್ಟಿಲ್ಲ. ಹುಟ್ಟು ಎಂಬುದೇ ಕೇವಲ           ಆಕಸ್ಮಿಕ.
    • ಜಾತಿ ಎಂದರೇನು? ಅದು ಎಂದೋ ನಿಂತ ಕೊಳೆತ ನೀರಾಗಿದೆ. ದುರ್ನಾತಕ್ಕೆ ಎಡೆ ಕೊಟ್ಟಿದೆ. 
    • ಮಾನಸಿಕ ಅನಾರೋಗ್ಯಕ್ಕೆ ಜಾತಿಯೇ ತವರೂರು.
    • ಮಹಾಮೇಧಾವಿ  ಬರ್ಟ್ರೆಂಡ್ ರಸೆಲ್ ಜಾತಿಯ ಬಗ್ಗೆ ಏನು ಹೇಳಿದ್ದಾನೆ? ನನಗಾವ ಜಾತಿಯೂ ಸಮ್ಮತವಲ್ಲ, ಎಲ್ಲ ಜಾತಿಗಳು ಸಾಯಲಿ ಎಂದು ಆಶಿಸುತ್ತೇನೆ ಎಂದು ಒಂದೆಡೆ ನುಡಿದಿದ್ದಾನೆ.
    • ಜಾತಿಗಳಲ್ಲಿ ನಂಬಿಕೆಯುಳ್ಳವನು ಧರ್ಮದ ಹೆಸರಿನಲ್ಲಿ ಕೆಡಕು ಮಾಡುತ್ತಾನೆ, ಧರ್ಮದ ಗದ್ದುಗೆಯ ಮೇಲೆ ಕುಳಿತು ಮಾನವ ಧರ್ಮವನ್ನೇ  ಮರೆಯುತ್ತಾನೆ. 
    • ತಾವು ಉತ್ತಮ ಜಾತಿ ಎಂದು ತಿಳಿದ ಅನೇಕರು ತಮ್ಮ ಜಾತಿಯನ್ನು ಕಟುಕನು ತನ್ನ ಚಾಕುವನ್ನು ಉಪಯೋಗಿಸುವಂತೆ ಉಪಯೋಗಿಸುತ್ತಾರೆ.
    ಇನ್ನು ಒಂದು ಮುಕ್ತಕ.
    ಒಗಟು 
    ಸಾವಿರ ಕಣ್ಣುಗಳಾರಿಗೆ? ಊಟದ 
    ಕೊನೆಯಲಿ ಬಡಿಸುವುದೇನು?
    ಕಡುಪಾಪಿಯಾದಗೆ ಸ್ವರ್ಗವು ಸಿಗುವುದೆ?
    ಇಂದ್ರಗೆ ಮಜ್ಜಿಗೆ ಸಿಗದು!
                                                             ************

    ಬುಧವಾರ, ಅಕ್ಟೋಬರ್ 17, 2012


    ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
    (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
    • ಕುಡಿತವನ್ನು ಕೊಂಡಾಗ ಕಿಸೆಯಲ್ಲಿನ ಕಾಸು ಹೋಗುತ್ತದೆ. ಬೆಳಗಾದ ನಂತರ ಕುಡಿತದ ಅಮಲು ಹೋಗುತ್ತದೆ. ಅಷ್ಟಿಷ್ಟು ತಿಂದನಂತರ ಅದರ ವಾಸನೆಯೂ ಹೋಗುತ್ತದೆ. ಆದರೆ ಕುಡಿತ ಮುಖದಲ್ಲಿ ಮಾಡುವ ಗುರುತು?   `ಇವನು ಕುಡುಕ' ಎಂದು ಬೋರ್ಡು ಬರೆದು ಹಣೆಯ ಮೇಲೆ ಹಚ್ಚುತ್ತದೆ.
    • ಕೆಲವರು ಅನುಗಾಲವೂ ತಮ್ಮ ಭವಿಷ್ಯದ ಬಗ್ಗೆಯೇ ಯೋಚಿಸುತ್ತ ಕುಳಿತು ತಮ್ಮ ಇರುವಿಕೆಯನ್ನು ಹಾಳು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸದಾ ತಮ್ಮ ಗತಜೀವನವನ್ನು ನೆನೆಯುತ್ತ ಇಂದು ಎಂಬುದನ್ನೆ ಮರೆಯುತ್ತಾರೆ. ಅಂತೂ ವರ್ತಮಾನ ಕಾಲದಲ್ಲಿ ಇಬ್ಬರೂ ಇಲ್ಲ. ಇಂತಹರು ಬುದ್ಧಿವಂತ ಪಶುಗಳು.
    • ನಿನ್ನೆ ಎಂಬುದು ಹೋಯ್ತು, ನಾಳೆ ಬರುವುದು ಅನುಮಾನ, ಇಂದು ಎಂಬುದೊಂದೇ ಸತ್ಯ. ನಾನೂ ಉಮರನ ವಿಚಾರ ಸರಣಿಯವನು.
    • "ನಿಮ್ಮ ಜಾತಿ ಯಾವುದು ಎಂದು ಕೇಳಬಹುದೇ, ಮಿಸ್ಟರ್?"   "ಥುತ್! ಅಯೋಗ್ಯರ ತಲೆಯಲ್ಲಿ ಅಯೋಗ್ಯ ವಿಚಾರಗಳೇ ಬರುತ್ತದೆ. ನಿನ್ನಂತಹ ಕ್ಷುಲ್ಲಕ ಮನುಷ್ಯ ನನ್ನ ಆತ್ಮ ಚರಿತ್ರೆ ಬರೆದುಕೊಳ್ಳಲೂ ಯೋಗ್ಯನಲ್ಲ. ಹೋಗು, ಹಾಳಾಗಿ ಹೋಗು"
    • ಹುಟ್ಟಿದ ಜಾತಿಗೂ ಬದುಕಿ ಬಾಳುತ್ತಿರುವ ಜಾತಿಗೂ ಯಾವ್ಯಾವ ಸಂಬಂಧವೂ ಇಲ್ಲ.
    • ಮಾನವ ಜಾತಿ ಎಂದು ಹೇಳಿಕೊಳ್ಳುವ ಯೋಗ್ಯತೆ ಇಲ್ಲದವರೂ ಇದ್ದಾರೆ. ಪ್ರಾಯಶಃ ಅವರೇ ಹೆಚ್ಚಿದ್ದಾರೆ.
    • ಈ ಜಾತಿಯಿಂದ ಯಾರಿಗಾವ ಉಪಯೋಗವಿದೆ. ದಡ್ಡ ಜನತೆಯನ್ನು ಸ್ವಾರ್ಥಕ್ಕಾಗಿ  ಉಪಯೋಗಿಸಿಕೊಂಡು ಮತಗಳನ್ನು ನುಂಗಿ ದೊಡ್ದವರೆನಿಸಿಕೊಳ್ಳುವ ಬೆಂಕಿ ಕೋಳಿಗಳಾದ ರಾಜಕಾರಿಣಿಗಳಿಗೆ ಚುನಾವಣೆ  ಸಮಯದಲ್ಲಿ ಮಾತ್ರ ಇದರ ಉಪಯೋಗ.
    ಇನ್ನು ನನ್ನದೊಂದು ಮುಕ್ತಕ.

    ಮೋಸ 
    " ನಿನ್ನನೆ ನಂಬಿದ ಜನರಿಗೆ ಮೋಸವ 
    ಏಕೆ ಮಾಡುವುದಯ್ಯ  ನೀನು?"
    " ನನ್ನನು ನಂಬದ ಜನರಿಗೆ ಮೋಸವ 
    ಹೇಗೆ ಮಾಡುವುದಯ್ಯ ನಾನು?"
                                                              **********

    ಸೋಮವಾರ, ಅಕ್ಟೋಬರ್ 15, 2012


    ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
    (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
    • ಸುಳ್ಳನ್ನು ನಂಬಿದಷ್ಟು ಸುಲಭವಾಗಿ ಯಾವ ಸಮಾಜವೂ ಸತ್ಯವನ್ನು ನಂಬಲು ಸಾಧ್ಯವಿಲ್ಲ.
    • ಇದು ಆತ್ಮಚರಿತ್ರೆ. ಜಗತ್ತಿನ ಮುಂದು ತನ್ನ ಆತ್ಮವನ್ನು ಬೆತ್ತಲೆಯಾಗಿ ನಿಲ್ಲಿಸಬೇಕು.ಅದಕ್ಕೆ ಬೇಕಾದುದು ಒಂದೇ ಒಂದು-ಬೌದ್ಧಿಕ ಪ್ರಾಮಾಣಿಕತೆ. ಇದು ಇಲ್ಲದವನು ಆತ್ಮಚರಿತ್ರೆ ಬರೆಯುವ ಉದ್ಧಟತನಕ್ಕೆ ಎಂದೂ ಕೈಹಾಕಬಾರದು.
    • ಜೀವನದ ಬರೀ ಗೆಲುವುಗಳನ್ನಷ್ಟೇ ಲಿಸ್ಟ್ ಮಾಡಿ ಸಾಲಾಗಿ ಪೋಣಿಸಿ ಬರೆದರೆ ಅದು ಆತ್ಮಚರಿತ್ರೆ ಆಗುವುದಿಲ್ಲ. ಆತ್ಮಪ್ರತಿಷ್ಠೆ ಚರಿತ್ರೆ ಆಗುತ್ತದದು.
    • ಗಾಂಧೀಜಿಯವರನ್ನೇ ಪೂರ್ತಿಯಾಗಿ ಮರೆತಿರುವ ಭಾರತದಲ್ಲಿ ಅವರು ಹೇಳಿರುವ ಒಂದು ಮಾತನ್ನು ಮರೆಯುವುದರಲ್ಲಿ ಏನೂ ಆಶ್ಚರ್ಯವಿಲ್ಲ. 
    • ನಮ್ಮ ದೇಶದ ಚರಿತ್ರೆಯಲ್ಲಿ ಒಬ್ಬನೇ ಗಾಂಧಿ, ಒಬ್ಬರೇ ಲಾಲ್ ಬಹದ್ದೂರ್ ಶಾಸ್ತ್ರಿ.  ಅನಂತರದವರೆಲ್ಲ ಎಲೆಕ್ಷನ್ ಗಾಂಧಿಗಳು, ಬೈ ಎಲೆಕ್ಷನ್ ಶಾಸ್ತ್ರಿಗಳು.
    • ಪ್ರಾಮಾಣಿಕ ಕಳ್ಳ, ಸತ್ಯಸಂಧನಾದ ರಾಜಕೀಯ  ಪುಢಾರಿ, ಸತಿ ಸೂಳೆ! ಹೀಗೂ ಉಂಟೆ? ಯಾಕಿರಬಾರದು?
    ಇನ್ನು ಒಂದು ಮುಕ್ತಕ. 
    ನಾದ 
    `ನಾನೆಷ್ಟು ಚೆನ್ನಾಗಿ ಹಾಡಿದೆ ಗೊತ್ತೇನು? 
    ನಾದ ತುಂಬಿತು ಸಭೆಯೊಳಗೆ'
    `ಇರಬೇಕು, ಅದರಿಂದ ಜಾಗವೆ ಸಾಲದೆ 
    ಜನ ಹೋಗುತಿದ್ದರು ಹೊರಗೆ!' 
                                                              ***********