ಸೋಮವಾರ, ಸೆಪ್ಟೆಂಬರ್ 24, 2012

ಮುಂದಿನ ಹೇಳಿಕೆಗಳು ಬೀ chi (ರಾಯಸಂ ಭೀಮಸೇನ ರಾವ್ 1913-1980)  ಅವರ `ಕಮಲೆಯ ಓಲೆಗಳು' ಪುಸ್ತಕದಿಂದ(ಚತುರ್ಥ ಮುದ್ರಣ2010). ಪ್ರಕಾಶಕರು `ಸಮಾಜ ಪುಸ್ತಕಾಲಯ, ಧಾರವಾಡ-580001. ಫೋ:2791616.
ಇವುಗಳನ್ನು ಓದಿದ ನಂತರ ಮೂಲ ಪುಸ್ತಕವನ್ನೂ, ಅವರ ಇತರ ಪುಸ್ತಕಗಳನ್ನೂ , ಕನ್ನಡದ ಇತರ ಪುಸ್ತಕಗಳನ್ನೂ  ಓದಬೇಕೆಂಬ ಅಪೇಕ್ಷೆ ಓದುಗರಲ್ಲಿ ಹುಟ್ಟಲಿ ಎಂಬುದು ನನ್ನ ಅಪೇಕ್ಷೆ. ಹಾಗೆ ಆದೀತು ಎಂಬುದು ನನ್ನ ನಿರೀಕ್ಷೆ.
  • ಸ್ತ್ರೀ ಜಾತಿಯಲ್ಲಿ ದೇವನು ಕುರೂಪಿಗಳನ್ನು ಸೃಷ್ಟಿಸಲೇ ಇಲ್ಲ -  ಕೆಲವರಿಗೆ ಸ್ಫುರದ್ರೂಪಿಯಾಗಿ ಕಾಣಲು ಕಲಿಸಿದ, ಇನ್ನು ಕೆಲವರಿಗೆ ಕಲಿಸಲಿಲ್ಲ.
  • ಸೌಂದರ್ಯ ಕಂಡಿತು, ಗುಣ? ಜಾಣನಿಗೆ ಸುಗುಣವೇ ಸೌಂದರ್ಯ, ಕೋಣನಿಗೆ ಸೌಂದರ್ಯವೇ ಸುಗುಣ. 
  • ಗಂಡನ್ನು ಹಿಡಿದೆಳೆಯುವ ಸೂಜಿಗಲ್ಲು - ಹೆಣ್ಣು. ಗಂಡಿನ ಪಾಲಿಗೆ ಹೆಣ್ಣು ಸೂಜಿಯೂ ಹೌದು. ಕಲ್ಲೂ ಹೌದು. 
  • ಹೆಣ್ಣಿನ ಹಿಂದೆ, ಬಸ್ಸಿನ ಹಿಂದೆ, ಓಡಬೇಡ ಎಂದೊಬ್ಬ ಅನುಭವಸ್ತರು ಹೇಳಿದ್ದಾರೆ. ಯಾಕೆ ಗೊತ್ತೆ? ಎರಡೂ ಧೂಳೆಬ್ಬಿಸಿ ಓಡುತ್ತದೆ.
  • ಹೆಣ್ಣು ಗಂಡಿನ ಪಾಲಿಗೆ ಸರ್ಪವೂ ಹೌದು,  ಸರ್ವವೂ ಹೌದು.
  • ನಿನ್ನ ಕಮಲ ಮಾತು ಮಾತಿಗೂ ನಗುತ್ತಿರುತ್ತಾಳಲ್ಲವೆ? ಹೌದು, ಅದರ ಅರ್ಥ ಅವಳ ಹಲ್ಲು ಸುಂದರವಾಗಿವೆ.
  • ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚ.
  • ಗಂಡನ ಸಂಕಷ್ಟದಲ್ಲಿ ಮರುಗದ ಹೆಂಡತಿಯು ಮಡಿಲಲ್ಲಿ ಕಟ್ಟಿಕೊಂಡ ಬೆಂಕಿ ಇದ್ದಂತೆ. ಬರೀ ಅಷ್ಟೇ ಅಲ್ಲ. ಗಂಡನ  ಆ ಸಂಕಷ್ಟಕ್ಕೂ ಅದೇ ಹೆಂಡತಿಯೇ ಕಾರಣಳಾಗುತ್ತಾಳೆ.
  • ಆಡುವುದು ಮಾಡುವುದು ಗಂಡನ ಕೈಲಿದೆ. ಆಗುವುದು, ಹೋಗುವುದು ಹೆಂಡತಿಯ ಕಾಲಡಿ ಇದೆ
  • ಮದುವೆಯಾದ  ಕೆಲಕಾಲ ಮಾತ್ರವೇ ಹೆಂಡತಿಯ ಮುಖದಲ್ಲಿ ಹೊಳೆದು, ಆ ಕೂಡಲೆ  ಇನ್ನಾರ ಮುಖಕ್ಕೋ ಹಾರುವ  ಮಹಾ ಭೂತಕ್ಕೆ ಸೌಂದರ್ಯ ಎಂಬುದು ಹೆಸರು.
  • ಈ  ಜಗತ್ತಿನ ಕನ್ನೆಗಳೆಲ್ಲವೂ ಒಳ್ಳೆಯವೇ! ಆದರೆ ಕೆಟ್ಟ ಹೆಂಡಂದಿರು ಎಲ್ಲಿಂದ ಬಂದರು ಎಂಬುದೇ ನನ್ನ ಪಾಲಿಗೆ ದೊಡ್ಡ ಶೇಷಪ್ರಶ್ನೆ.
  • ಒಬ್ಬ ಹೆಂಡತಿ ಸಾಕು ಎಂದು ಕಾಯಿದೆ ಹೇಳುತ್ತದೆ - ಏಕೆ ಗೊತ್ತೆ? ಅದಕ್ಕೂ ಕಡಿಮೆ ಇಲ್ಲವಲ್ಲಾ?
ಇವತ್ತಿಗಿಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ. ಧಾಟಿ ಹಿಡಿಯಲು ಕಷ್ಟವೆನಿಸಿದರೆ, ಮೊದಲಿಗೆ - ಮೇಷ್ಟ್ರುಮ, ಹಾಮೂರ್ಖ, ಎಂದುಬೋರ್,  ಡಿನಮೇಲೆ, ಬರೆದವ, ನೀನೇನೋ, ಗುಂಡ  ಹೀಗೆ ಓದಿಕೊಳ್ಳಿ.
ಸತ್ಯ!
"ಮೇಷ್ಟ್ರು ಮಹಾಮೂರ್ಖ ಎಂದು ಬೋರ್ಡಿನ ಮೇಲೆ 
ಬರೆದವ ನೀನೇನೋ ಗುಂಡ?"
"ಹೌದು ಸಾರ್." "ಕೂತುಕೋ, ಸಂತೋಷವಾಯಿತು 
ಸತ್ಯವ ಹೇಳಿದ್ದರಿಂದ"! 
                                                                 ***********

ಶುಕ್ರವಾರ, ಸೆಪ್ಟೆಂಬರ್ 21, 2012

ಬೀchiಯವರ `ಕಮಲೆಯ ಓಲೆಗಳು'(ಪ್ರ: ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ-580001) ಪುಸ್ತಕದಿಂದ -
  • ಮೋಹನ್! ಅವಕಾಶ ಇಲ್ಲದುದಕ್ಕಾಗಿ ಕೆಲವರು ಶ್ರೀರಾಮರು. ಇನ್ನು ಕೆಲವರು ಅವಕಾಶವಿದ್ದರೂ ಧೈರ್ಯವಿಲ್ಲದುದಕ್ಕಾಗಿ ಶ್ರೀರಾಮರು. ಇಂಥವರೆಲ್ಲ ಕೇವಲ ಕಾಯೇನ ಮತ್ತು ವಾಚಾ ಮಾತ್ರ  ಶ್ರೀರಾಮರು. ಅಂದರೆ ಮನಸಾ? 
  • ವಚನದೊಳಗೆಲ್ಲವರು ಶುಚಿ ವೀರ  ಸಾಧುಗಳು
          ಕುಚ, ಶಸ್ತ್ರ, ಹೇಮ ಸೋಂಕಿದರೆ ಲೋಕದೊಳ-
          ಗಚಲದವರಾರು? ಸರ್ವಜ್ಞ
          ಈ ಸತ್ಯೋಕ್ತಿಗೆ ನಾನೂ ನಿಜಕ್ಕೂ ಅಪವಾದವಲ್ಲ ಎಂಬುದನ್ನೊಪ್ಪಿಕೊಂಡೆ.
  • ಬೆಳಿಗ್ಗೆ ರೇಡಿಯೋದಲ್ಲಿ ಇಂದಿನ ಹವಾಮಾನ ಕೇಳಿದ್ದೆ. ಸಂಜೆಗೆ ಮೋಡ ಕವಿದ ವಾತಾವರಣ ಇರಬಹುದು,  ಇಲ್ಲವೆಂದೂ ಇರಬಹುದು. ತುಂತುರು ಮಳೆ ಆಗುವ ಸಂಭವ ಉಂಟು. ಆದರೆ ಮಳೆಯೇ ಆಗದಿರುವ ಸಂಭವವೇ ಹೆಚ್ಚು ಎಂದು ಹೇಳಿದಳು ಆ ರೇಡಿಯೋ ಮಾತೆ.
  • ಆಗಲೆ ಚಿಕ್ಕದಾಗಿ ಸುರುವಾಗಿತ್ತು-ಅತ್ತೆ-ಸೊಸೆಯರ ಜಗಳ. ಜಗಳಕ್ಕೆ ಕಾರಣ ಗೊತ್ತೆ? ಒಂದೇ ಒಂದು ಕಾರಣ-ಅವರಿಬ್ಬರೂ ಅತ್ತೆ ಸೊಸೆಯರು! ಸಾಲದೇ? ಇದೇನು ಸಾಮಾನ್ಯ ಕಾರಣವೇ?
  • ಹೊರಬಂದು ನೋಡಿದೆ, ನನ್ನ ತಾಯಿಯವರು ಗೋಡೆಗೆ ತಲೆ ಹೊಡದುಕೊಳ್ಳುತ್ತಿದ್ದರು. ಏನಾಯಿತೆಂದು ವಿಚಾರಿಸಿದೆ. ಏನೂ ಇಲ್ಲ. ಆದುದು ಇಷ್ಟೆ,
         "ನನ್ನ ದೇವರು ಇಡಬಾರದು ಇನ್ನು." ಎಂದು ನಮ್ಮ ತಾಯಿ ಅಂದರಂತೆ.
        "ನಾನೂ ಅದನ್ನೇ ಅಂಬೋದು" ಎಂದು ನನ್ನ ಹೆಂಡತಿ ಅಂದಳಂತೆ. 'ನನ್ನನ್ನು ಸಾಯಿ ಎಂದಂದಳು  ನಿನ್ನ ಹೆಂಡತಿ'                ಎಂದು ತಾಯಿಯವರ ದೂರು. ಇದಕ್ಕೆ ನನ್ನ ಹೆಂಡತಿಯ ಸಮ್ಜಾಯಿಷಿ ಏನು ಗೊತ್ತೆ?  "ನಾನೂ ಅದನ್ನೇ ಅಂಬೋದು ಅಂದರೆ, ನನ್ನನ್ನೂ ದೇವರು ಇಡಬಾರದು ಇನ್ನು-ಅಂಬೋ ಅರ್ಥದಾಗೆ ನಾನು ಅಂದೆ" ಎಂದವಳ ವಾದ, ಇದನ್ನು ಹೇಗಯ್ಯಾ ಪರಿಹರಿಸುವುದು?
ಇವತ್ತಿಗಿಷ್ಟು. ಇನ್ನು ಸೋಮವಾರ. ರಜಾದಲ್ಲಿ ಕನ್ನಡ ಪುಸ್ತಕ, ಪತ್ರಿಕೆ, ಮ್ಯಾಗಜೀನ್, ಬ್ಲಾಗ್ ಏನಾದರೂ ಓದಿ. Enjoy week end. Enjoy life:)
ಈಗ ನನ್ನ ಒಂದು ಮುಕ್ತಕ:
ಸಾಮರ್ಥ್ಯ 
ತಾನಿಲ್ಲಿದ್ದೇನೆಂದು ತಿಳಿಸಲು ಜನರನು 
ಕಸ್ತೂರಿ ಕರೆಯುವುದಿಲ್ಲ.
ಪರಿಮಳದಿಂದಲೆ ಅವರನು ಸೆಳೆಯುವ 
ಸಾಮರ್ಥ್ಯ ಅದಕಿಹುದಲ್ಲ!
                                                                 -----


ಬುಧವಾರ, ಸೆಪ್ಟೆಂಬರ್ 19, 2012

  • ಸತ್ತ ಮೇಲೆ ಸಿಕ್ಕುವ ಸ್ವರ್ಗಕ್ಕಾಗಿ ಇಂದಿನ ಬಾಳನ್ನು ನರಕಸದೃಶವಾಗಿ ಮಾಡಿಕೊಳ್ಳುವುದು ಬೇಡ. ಇಂದಿನ ಇರುವಿಕೆಯನ್ನು ತಿಳಿವಳಿಕೆಯಿಂದ ತಿದ್ದಿಕೊಂಡರೆ ಇದೇ  ಸ್ವರ್ಗ .
  • ಪ್ರತಿಯೊಬ್ಬನಿಗೂ ಒಂದು ಬಾಳಿನ ತತ್ವ ಬೇಕು. ಮಾನವ ಜೀವನವನ್ನು ಇಂದಿನಕಿಂತಲೂ ಹೆಚ್ಚು ಸುಗಮವನ್ನಾಗಿ, ಆದರ್ಶಪ್ರಾಯವನ್ನಾಗಿ ಮಾಡುವಂತಹ ತತ್ವ ಬೇಕು.
  • ದೇವನಿಗೂ ಒಂದು ಆತ್ಮಗೌರವ ಎಂಬುದಿದೆ. ಬೇರಾವ ಪ್ರಾಣಿಗೂ ಕೊಡಲಾರದಂತಹ ಬುದ್ಧಿಶಕ್ತಿ ಒಂದನ್ನು ದೇವನು ಮಾನವನಿಗೆ ಮಾತ್ರ  ಇತ್ತಿದ್ದಾನೆ. ಇದರ ಸದುಪಯೋಗ ಮಾಡದಿರುವುದೇ ದೈವದ್ರೋಹ.
  • ದೇವನು ಸರ್ವಾಂತರ್ಯಾಮಿ ಮತ್ತು ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎಂಬ ವೇದವಾಕ್ಯವನ್ನು ಎಲ್ಲ ಸೊಸೆಯರೂ ಒಪ್ಪುತ್ತಾರೆ. ಆದರೆ ಎಲ್ಲದರಲ್ಲಿಯೂ ಇರುವ ಅದೇ ದೇವರು ಅದೇಕೆ ತನ್ನ ಅತ್ತೆಯಲ್ಲಿ ಇರುವುದಿಲ್ಲ? ಅತ್ತೆಯೊಡನೆ ಹಣಾಹಣಿ ಜಗಳವಾಡುತ್ತಾಳೆ. ದುಷ್ಟ ಶಬ್ದಗಳಿಂದ ಬೈಯುತ್ತಾಳೆ.
  • " ಕಾಲ ಎಷ್ಟು ಕೆಟ್ಟಿದೆ  ನೋಡಿ, ನಮ್ಮ ಹಿಂದೂ ಸಂಸ್ಕೃತಿಯೇ ಹಾಳಾಗಿಹೋಗಿದೆ,  ಅಲ್ಲಿರುವ ಆ ಇಬ್ಬರಲ್ಲಿ ಗಂಡು ಯಾರು ಹೆಣ್ಣು ಯಾರು ನೀವೇ ಹೇಳಿ ಸಾರ್" ಎಂದಂದೆ.  
          ಒಂದರೆ ನಿಮಿಷ ಆ `ಸಾರ್' ನನ್ನನ್ನು ದುರುಗುಟ್ಟಿ ನೋಡಿತು.
          " ಏನ್ರೀ ನೀವು  ಮಾತನಾಡೋದು?  ಏನು ಮರ್ಯಾದೆ ಎಂಬುದೇ ಇಲ್ಲವೇ? ನನಗೆ ಸಾರ್ ಅಂತೀರಾ ನೀವು? ನಾನು                                                   ಆ ಎರಡೂ ಮಕ್ಕಳ ತಾಯಿ, ತಿಳೀತೆ?"
ಇವತ್ತಿಗೆ ಇಷ್ಟು. ಇನ್ನುಶುಕ್ರವಾರ.  ಈಗ ನನ್ನದೊಂದು ಮುಕ್ತಕ.

ತಲೆಮಾರಿನ ಅಂತರ 
"ಕುಂಟುವುದೇಕಜ್ಜ?" ಕೇಳಿದೆ ತಾತನ 
"ಹೆಬ್ಬುಲಿ ಕಚ್ಚಿತು" ಎಂದ.
ಮೊಮ್ಮಗ ತಿಂಗಳು ಹಾಸಿಗೆ ಹಿಡಿದನು 
ಚಪ್ಪಲಿ ಕಚ್ಚಿದ್ದರಿಂದ!


ಸೋಮವಾರ, ಸೆಪ್ಟೆಂಬರ್ 17, 2012

  • ನಿನಗೆ ನಿನ್ನ ದೇವರೆಂದರೆ ಬಹು ಭಯ, ಭಕ್ತಿ. ನನಗೆ ನನ್ನ ದೇವರೆಂದರೆ ಅತೀವ ಪ್ರೇಮ. ನಾನು ನನ್ನ ದೇವರನ್ನು ನನ್ನನ್ನು ನಾನೇ ಪ್ರೇಮಿಸಿದಷ್ಟೇ ಪ್ರೇಮಿಸುತ್ತೇನೆ. 
  • ನೀನು ನಿನ್ನ ದೇವರಿಗೆ ಅಂಜುತ್ತೀಯಾ, ಲಂಚ ಕೊಟ್ಟು ಸರಿಮಾಡಿಕೊಳ್ಳಲು ನೋಡುತ್ತೀಯಾ! ನಾನು ನಿನ್ನನ್ನು ಕಂಡು ನಗುತ್ತೇನೆ, ನನ್ನ ದೇವರೂ ನಿನ್ನ ದೇವರನ್ನು ಕಂಡು ನಗುತ್ತಾನೆ.
  • ನಾನೆಂದೂ ನಿರೀಶ್ವರವಾದಿ ಅಲ್ಲ, ದೇವರಿಲ್ಲ ಅಂದಿಲ್ಲ, ದೇವರು ಎಂಬ ವಸ್ತು ಒಂದು ಬೇಕೇಬೇಕು. ಒಂದು ವೇಳೆ ಇಲ್ಲದಿದ್ದಲ್ಲಿ ಒಬ್ಬನನ್ನು ಸೃಷ್ಟಿ ಮಾಡಿಕೋ  ಎಂದು ತಿಳಿದವರು ಹೇಳಿದ್ದುಂಟು. ಈ ಮಾತು ನನಗೂ ಒಪ್ಪಿಗೆ. ಏಕೆಂದರೆ ದೇವರು, ಧರ್ಮ ಮುಂತಾದವು ಜನಸಾಮಾನ್ಯರನ್ನು ಅಂಕೆ, ಆತಂಕಗಳಲ್ಲಿ ಹಿಡಿದಿರುತ್ತವೆ. ದುಷ್ಟ ಕಾರ್ಯಗಳಿಂದ ದೂರ ಇಡುತ್ತವೆ. ದೇವರು ಅಂತಹರ ಪಾಲಿಗೆ ಒಂದು ಬೆದರುಗೊಂಬೆ.
  • ಈಗ ನನಗೂ ನಿನಗೂ ಇರುವ ಭೇದ ಇಷ್ಟೇ. ಇದೊಂದೇ. ಬೆದರು ಗೊಂಬೆಯನ್ನು ಕಂಡು ಭಯಪಟ್ಟು ಓಡುವ ಹಕ್ಕಿ ನೀನು. ಇದು ಬರೀ ಬೆದರುಬೊಂಬೆಯೆಂಬುದನ್ನು  ಅರ್ಥ ಮಾಡಿಕೊಂಡು ಅದರ ಎದೆಯಲ್ಲಿಯೇ ಗೂಡು ಮಾಡಿಕೊಂಡು ವಾಸವಾಗಿರುವ ಹಕ್ಕಿ ನಾನು.
ಇವತ್ತಿಗೆ ಇಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ.
ಜಾಗ 
"ಮೂರ್ಖರು ತುಂಬಿಕೊಂಡಿದ್ದಾರೆ ನಿಮ್ಮ  ಈ
ಸಂಘಕೆ  ನಾ ಸೇರಲೆಂತು?"
"ಹಾಗಿದ್ದರೂ ಕೂಡ ಚಿಂತಿಸದಿರಿ ನೀವು 
ಇನ್ನೊಬ್ಬರಿಗೆ ಜಾಗವುಂಟು!"
                                                      -----

ಶುಕ್ರವಾರ, ಸೆಪ್ಟೆಂಬರ್ 14, 2012

  • ಈ ಪದ್ಮಮ್ಮ ವಿಪರೀತ ಪತಿವ್ರತೆ, ಅಥವಾ ಪತಿವೃಥಾ! ಆಕೆಯ ಗಂಡ ಮಾತ್ರ ಸಾಕ್ಷಾತ್ ದೇವರಂಥವನು -ಇದ್ದಾನೆ ಅಂದರೆ ಇದ್ದಾನೆ, ಇಲ್ಲ ಅಂದರೆ ಇಲ್ಲ-ಹಾಗಿದ್ದಾನೆ ಪ್ರಾಣಿ.
  • ನಾನು, ನೀನು, ಈ ವಿಶ್ವದಲ್ಲಿಯ ಯಾವ ಪ್ರಾಣಿಯೂ ಪಾಪಸಂಭವರಲ್ಲ. ಇದನ್ನು ಭದ್ರವಾಗಿ  ನಂಬು.
  • ಹಿಮಾಲಯದ ಶಿಖರದಷ್ಟೆತ್ತರದಲ್ಲಿದ್ದ ಹಿಂದೂ ಧರ್ಮ, ಸಪ್ತ ಸಾಗರಗಳಷ್ಟು ಆಳ, ವಿಸ್ತಾರಗಳಿದ್ದ ಹಿಂದೂ ಧರ್ಮ-ಒಂದು ಧರ್ಮವಾಗಿ ಉಳಿದಿದೆಯೇ?
  • ಇಂದು ಜನತೆಗೆ ದೇವರು ಬೇಕಿಲ್ಲ, ದೇವಾಲಯಗಳು ಬೇಕು. ಮತಾಚರಣೆ , ಗ್ರಂಥಪೂಜೆ ಈ ದನದಂತಹ ಜನತೆಗೆ ಸಾಕೇ ಸಾಕು.
  • ಮಾಧೂ! ನತ್ತು ಕಳೆದಿದೆ, ತೂತು ಉಳಿದಿದೆ-ಆ ತೂತನ್ನೇ ನತ್ತು ಎಂದು ಭ್ರಮಿಸಿ ನಾವಿಂದು ಸಂತೃಪ್ತರಾಗಿ ಕತ್ತೆಯಂತೆ ತಿಪ್ಪೆಯಲ್ಲಿ ಹೊರಳಾಡುತ್ತಿದ್ದೇವೆ.
ಇಂದಿಗಿಷ್ಟು. ಇನ್ನು ನನ್ನದೊಂದು ಮುಕ್ತಕ. ಆತನು, ನಿನಗಿಂದು, ಮೋಸ, ಮಾಡಿದನೇನು, ಹೀಗೆ ವಿಭಾಗ ಮಾಡಿಕೊಂಡು ಓದಿದರೆ ಧಾಟಿ ಹಿಡಿಯಲು ಸುಲಭ.
ಮೋಸ 
ಆತನು ನಿನಗಿಂದು ಮೋಸ ಮಾಡಿದನೇನು? 
ನಾಚಿಕೋಬೇಕಯ್ಯ ಅವನು.
ಆತನೇ ಮತ್ತೊಮ್ಮೆ ಮೋಸ ಮಾಡಿದನೇನು?
ನಾಚಿಕೋಬೇಕಯ್ಯ ನೀನು!
                                                  -----