ಶನಿವಾರ, ಮಾರ್ಚ್ 16, 2013


ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • ಸೂಳೆಯ ಮನೆಗೂ ಎರಡೆರಡು ಬಾಗಿಲು ಬೇಡವೆಂದರೆ ಬಾಗಿಲು ಮಾಡುವ ಬಡಗಿ ಬದುಕುವುದಾದರೂ ಎಂತು?
  • ಅನೇಕಾನೇಕ ದೊಡ್ಡ ಮನುಷ್ಯರ ಇಲ್ಲದ ಮಾನವನ್ನು ಕಾಯ್ದಿರುವುದು, ಇಂದು ಕಾಯುತ್ತಿರುವುದು, ಮುಂದೂ ಕಾಯುವುದು ಆ ದೊಡ್ಡ ಮನುಷ್ಯರೆನಿಸಿಕೊಂಡವರ ನಡತೆಯಂತೂ ದೇವರಾಣೆಯಾಗಿಯೂ ಅಲ್ಲ. ಸೂಳೆಯ ಮನೆಯ ಹಿತ್ತಲ ಬಾಗಿಲಿಗೆ ಅವರು ಮತ್ತು ಅವರ ವಂಶಜರು ನಿತ್ಯವೂ ಕೈ ಮುಗಿಯಬೇಕು, ಕುಂಕುಮವಿಟ್ಟು ಪೂಜಿಸಬೇಕು ಅದನ್ನು. ಸಮಯೋಚಿತವಾಗಿ ಪಾರಾಗಲು ಅದು ಇದ್ದಿತೆಂದು ಅಲ್ಲವೇ ಇವರೆಲ್ಲರೂ ಇಂದು ತಲೆಯೆತ್ತಿ ಓಡಾಡುತ್ತಿದ್ದಾರೆ? ಇಲ್ಲದಿದ್ದರೇನಿತ್ತು? 
  • ಬೆನ್ನ ಮೇಲೆ ಕೈಯಿಟ್ಟು ಸಲುಗೆಯಿಂದ ನುಡಿದರು ಮೇನೇಜರು. ನೂರು ವರ್ಷಗಳ ಗೆಳೆಯರಾಗಬಲ್ಲರು ಸೆರೆ ಕುಡುಕರು, ಮೂರೇ ನಿಮಿಷಗಳಲ್ಲಿ.          
        ಆದರೆ ಒಂದು. ಆಗ ಹೆಚ್ಚು ಕುಡಿದಿರಬೇಕು, ಇಲ್ಲವೆ ಅದರ ದಾಹದಿಂದ ತತ್ತರಪಡುತ್ತಿರಬೇಕು. 
  • "ಸೋಡಾ ಮುಗಿದಂತಿದೆ. ನೀರಾದರೆ ನಡೆಯುತ್ತೆ ತಾನೇ?" ಗ್ಲಾಸುಗಳಿಗೆ ಸಮನಾಗಿ ಸುರುವಿ ಕೇಳಿದರು ಮೇನೇಜರು ವಿಷಕಂಠರಾಯರು.  "ಅದೂ ಇಲ್ಲದೆಯೂ ನಡೆಯುತ್ತದೆ ಸ್ವಾಮೀ, ನನಗೆ. ನೀರಿಗೂ ನನಗೂ ಕೊಂಚ ಅಷ್ಟಕ್ಕಷ್ಟೆ. ಸ್ನಾನ ಗೀನ ಮುಂತಾದ ಕೇವಲ ಬಹಿರಂಗ ಶುದ್ಧಿಗೆ ಮಾತ್ರವೆ ನಾನು ನೀರನ್ನು ಉಪಯೋಗಿಸುತ್ತೇನೆ."       
  • ಸಾವಕಾಶವಾಗಿ ಕೊಂಚ ಕೊಂಚವನ್ನೇ ಸ್ವೀಕರಿಸುತ್ತಿದ್ದ ವಿಷಕಂಠರಾಯ ಕೇಳಿದ, ಮುಸಿಮುಸಿ ನಕ್ಕು. "ಅದೇನು ವಾಸುದೇವರಾಯರೆ! ನೀವು ಕುಡಿಯುವಾಗ ಕಂಣೇಕೆ ಮುಚ್ಚುತ್ತೀರಿ?"        
          "ಇದು `ಬ್ರಾಹಿಬಿಷನ್ ಏರಿಯಾ ಅಲ್ಲವೇನು ಸ್ವಾಮಿ? ಕುಡಿಯುವಾಗ ಯಾರೂ ನೋಡಕೂಡದು ನೋಡಿ.  ಮೊಟ್ಟಮೊದಲು ನಾನೇ ನೋಡಕೂಡದೆಂದು ಕಂಣು ಮುಚ್ಚಿಬಿಡುತ್ತೇನೆ. ತಾವೂ ಮುಗಿಸಿಬಿಡಿ, ಅದನ್ನೆಷ್ಟು ಹೊತ್ತು ಗುಟುಕರಿಸುತ್ತ ಕೂಡುತ್ತೀರಿ? ಪಾನಪ್ರತಿಬಂಧ ನಿರೋಧವಿರುವಲ್ಲಿ..." 
"ಏನಂದಿರಿ? ಪಾನಪ್ರತಿಬಂಧ ನಿರೋಧವೆ?" ನಕ್ಕರು ಇಬ್ಬರೂ. 

ಇನ್ನು ನನ್ನ ಮುಕ್ತಕ, ಇದೋ:

ದುರದೃಷ್ಟ 
ಅನುಕೂಲದೊಳಗೆಯೆ ಆಪತ್ತು ಬರುವುದು 
ಅದೃಷ್ಟ ಸರಿಯಿಲ್ಲದರಿಗೆ. 
ಬೀಸಿದ ಗಾಳಿಗೆ ಮಳೆಯಲಿ ಹಿಡಿದಿದ್ದ 
ಕೊಡೆಯೆ ಮಗುಚಿಕೊಂಡ ಹಾಗೆ!
                                                                   * * * * * * * * * *



    ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ