ಶುಕ್ರವಾರ, ಸೆಪ್ಟೆಂಬರ್ 28, 2012

ಇನ್ನು ಬೀchi ಯವರ `ಆಟೋ' ಕಾದಂಬರಿಯಿಂದ ( ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020. ಫೋ-2367676. Email:sahithyaprakashana@yahoo.co.in)  ಆಯ್ದ ವಿಚಾರಗಳು.
  • "ಬಾಯಿ ಮುಚ್ಚೋ ಬದ್ಮಾಷ್! ಗಂಡು ಖರಾಬ್ ಆದ್ರೆ ದಿಲ್ದಾರ್ ಆದ್ಮಿ ಹೆಣ್ಣು ದಿಲ್ದಾರ್ ಆದ್ರೆ ಖರಾಬ್ ಅಮ್ತೀಯಾ? ಸೈತಾನ್"
  • ಮಲೇರಿಯಾ ರೋಗವೆಂದು ತಿಳಿದು ಔಷಧ ಕೊಟ್ಟು ಅವನನ್ನು ಕೊಂದ ಡಾಕ್ಟರು, ಅವನು ಸತ್ತ ತಕ್ಷಣವೇ ಅದು `ಟೈಫಾಡ್ ' ಎಂದು ಕರೆಕ್ಟ್ ಆಗಿ `ಡಯಾಗ್ನೈಜ್' ಮಾಡಿದ್ದರು.
  • ಅಳವಂಡಿ ಸಿಲ್ಕು ಫಾರ್ಮಿಗೆ ಗಾಡಿ ಹೊಡೆದು, ತನ್ನೆತ್ತಿನೊಡನೆ ಮಳೆ ಬಿಸಿಲಿನಲ್ಲಿ ಮೈಮುರಿದು ದುಡಿಯುವವನಿಗೆ ಜಾತಿ ಗೀತಿಗಳಿಂದ ಆಗಬೇಕಾದುದೇನಿದೆ? ಅವನೇನು ಕಾರ್ಪೋರೇಶನ್ ಕೌನ್ಸಿಲರ್ ಆಗಬೇಕೆ?
  • ಜಾತಿ ಜಗಳಗಳೆಲ್ಲವೂ ಬಹು ಬುದ್ಧಿಯುಳ್ಳವನಿಗೆ. 
  • ಮಕ್ಕಳಾಗಲಿಲ್ಲ ಎಂಬುದಕ್ಕೆ ಯಾವಾಗಲೂ ಒಂದೇ ಅರ್ಥ ಹೆಂಣು  ಬಂಜೆ, ಇದಕ್ಕೆ ಪರಿಹಾರ? ಗಂಡಿಗೆ ಇನ್ನೊಂದು ಹೆಂಣು  ತರತಕ್ಕದ್ದು. ಆ ಹೆಂಣಿಗೇ ಇನ್ನೊಂದು ಗಂಡನ್ನು.....ಛೆ! ಉಂಟೆ?
  • ಪೈಸಾ ಇಲ್ಲದಿದ್ರೆ ಯಾರು ಕೇಳ್ತವ್ರೆ ? ಈ ಹರಾಮ್ ಧುನಿಯಾದಲ್ಲಿ ಪೈಸಾನೆ ಎಲ್ಲಾ, ಪೈಸಾನೆ ಅಲ್ಲಾ!
  • ಸಾಕಷ್ಟು ದಡ್ಡತನವು ಜನತೆಗೆ ಸಹಜವಾಗಿಯೆ ಇರುತ್ತದೆ. ವಂಚಕರಿಗೆ ಸ್ವಲ್ಪ ಬುದ್ಧಿ ಇದ್ದರೇ ಸಾಕೇ ಸಾಕು, ಇವನ ಕೆಲಸವೂ ಸುಲಲಿತವಾಗಿ ಆಗಿಹೋಗುತ್ತದೆ.
  • ಒಂದು ಬಾರಿ ಮೋಸ ಮಾಡಿದ ಮೇಲೆ ಎರಡನೆಯ ಸಲ ಸುಲಭ. ಅನುಭವವು ಎಲ್ಲಿಯಾದರೂ, ಎಂದಾದರೂ ವ್ಯರ್ಥವಾದುದುಂಟೆ?
ಇಂದಿಗಿಷ್ಟು. ಇನ್ನು ಸೋಮವಾರ.
ರಜೆಯಲ್ಲಿ ಕನ್ನಡದ ಪುಸ್ತಕ, ಪತ್ರಿಕೆ, ಮ್ಯಾಗಜೀನ್, ಬ್ಲಾಗ್ ಏನಾದರೂ ಓದಿ. 
Enjoy week end. Enjoy life!
ಈಗ ನನ್ನದೊಂದು ಮುಕ್ತಕ.
ಮಗಳು 
`ಸಿನೆಮಾಕ್ಕೆ ಬಾರೆಂದು ನಾಲ್ಕಾರು ಹುಡುಗರು 
ಕರೆಯುತಿದ್ದರು ನಿಮ್ಮ ಮಗಳ.'
`ಹೋದಳೇನಾಕೆಯು?' `ಇಲ್ಲ'  `ಆ ಹುಡುಗಿಯು 
ಖಂಡಿತ ನನ್ನ ಮಗಳಲ್ಲ!'
                                                     *****


  


ಬುಧವಾರ, ಸೆಪ್ಟೆಂಬರ್ 26, 2012


  • ತಂದೆ ಬರೀ ತಂದೆ ಮಾತ್ರ. ತಾಯಿ ಮಕ್ಕಳಿಗೆ ತಾಯಿಯೂ ಹೌದು ತಂದೆಯೂ ಹೌದು. ಬರೀ ಅಷ್ಟೇ ಅಲ್ಲ, ಗುರುವೂ ಹೌದು.
  • ಹೆಣ್ಣನ್ನು ಪ್ರಕೃತಿ  ಮನಃಪೂರ್ವಕವಾಗಿ  ಸೃಷ್ಟಿಸಿತು, ಶ್ರದ್ಧೆಯಿಂದ, ಆಸಕ್ತಿಯಿಂದ ಕಟ್ಟಕ್ಕರತೆಯಿಂದ ಸೃಷ್ಟಿಸಿತು. ಈ  ಮಾತನ್ನು ಹೇಳುವವರಾರು? ಬರೀ ನಾನಲ್ಲ, ವೆಂಡಲ್ ಹೋಮ್ಸ್ ಹೇಳಿದ್ದಾನೆ.
  • ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಒಂದೇ ಒಂದು ಮಾರ್ಗವಿದೆ ಮಾಧೂ! ಅದೇನು ಗೊತ್ತೆ? ಮೊದಲು ಹೆಣ್ಣನ್ನು ಪ್ರೀತಿಸು. ಅನಂತರ ಅದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ. ಎಂತಹ ಒಳ್ಳೆಯ ಒಳದಾರಿ ಇದು?
  • ಹೆಣ್ಣು ಎಂದೂ ತಪ್ಪು ಯೋಚನೆ ಮಾಡುವುದಿಲ್ಲ. ಏಕೆ? ಅದು ಯೋಚನೆಯನ್ನೇ  ಮಾಡುವುದಿಲ್ಲವಲ್ಲಾ ? ಇದು ಅವಹೇಳನ ಮಾಡುವ ಮಾತಲ್ಲ. ಹೆಣ್ಣು ಯೋಚನೆ ಮಾಡುವುದಿಲ್ಲ. ಮಾಡಬೇಕಾಗಿಯೂ ಇಲ್ಲ. ಅದಕ್ಕೆ ಪ್ರಕೃತಿಯ ಅಂತರ್ಬೋಧೆ ಎಂಬುದಿದೆ. ಅದನ್ನೇ ನಾವು ಇಂಗ್ಲಿಷ್ನಲ್ಲಿ ಸಿಕ್ಸ್ತ್ ಸೆನ್ಸ್  ಎಂದು ಕರೆಯುತ್ತೇವೆ. 
  • ಕೆಲ ಹೆಣ್ಣುಗಳಿಗೆ  ಹಲ ಗಂಡುಗಳಿಗಿಂತಲೂ ಬುದ್ಧಿ ಕಡಿಮೆ ಇರಬಹುದು. ಆದರೆ ಹೆಣ್ಣಿಗೆ ಹೆಚ್ಚಿನ ವಿವೇಕ ಇದೆ. ವಿವೇಚನೆ ಇದೆ. ಇದೆಲ್ಲಕ್ಕೂ ಹೆಚ್ಚಾಗಿ ವ್ಯಾವಹಾರಿಕ ಬುದ್ಧಿ ಇದೆ.
  • ಜೋಸೆಫ್ ಜೋಬರ್ಟ್ ಈ ವಿಷಯದಲ್ಲಿ ಏನು ಹೇಳುತ್ತಾನೆ ಬಲ್ಲೆಯಾ? ಒಂದು ವೇಳೆ ಅವಳೇ ಗಂಡಾಗಿದ್ದರೆ ಯಾರು ಒಳ್ಳೆಯ ಗೆಳೆಯರಾಗಿರುತ್ತಿದ್ದರೋ, ಅಂತಹ ಹೆಣ್ಣನ್ನು ಮದುವೆಯಾಗು ಎಂದನ್ನುತ್ತಾನೆ.
  • ಕಣ್ತೆರೆದು ಮದುವೆಯಾಗು, ತದನಂತರ ಕಣ್ಮುಚ್ಚು - ಎಂಬುದು ಬಹು ಒಳ್ಳೆಯ ಜಾಣ್ಣುಡಿ.
ಇಲ್ಲಿಗೆ ಬೀಚಿಯವರ  `ಕಮಲೆಯ ಓಲೆಗಳು' ಮುಗಿಯಿತು.
ಇಂದಿಗಿಷ್ಟು. ಇನ್ನು ಶುಕ್ರವಾರ. ಬೀಚಿಯವರ ಇನ್ನೊಂದು ಪುಸ್ತಕ.
ಈಗ ನನ್ನ ಒಂದು ಮುಕ್ತಕ.

ಬೀchi ಉವಾಚ 
ಬೆಂಗಳೂರಿನ ಸಿಟಿ ಬಸ್ಸುಗಳೆಂದರೆ
ಕಷ್ಟಗಳಿದ್ದಂತೆ ಮಗನೆ.
ತಿಳಿಸಿ ಬಾರವು ಅವು ಬಂದರೆ ಒಂದರ
ಹಿಂದೊಂದು ಬರುವವು ಒಡನೆ!
                                                                   ***

ಸೋಮವಾರ, ಸೆಪ್ಟೆಂಬರ್ 24, 2012

ಮುಂದಿನ ಹೇಳಿಕೆಗಳು ಬೀ chi (ರಾಯಸಂ ಭೀಮಸೇನ ರಾವ್ 1913-1980)  ಅವರ `ಕಮಲೆಯ ಓಲೆಗಳು' ಪುಸ್ತಕದಿಂದ(ಚತುರ್ಥ ಮುದ್ರಣ2010). ಪ್ರಕಾಶಕರು `ಸಮಾಜ ಪುಸ್ತಕಾಲಯ, ಧಾರವಾಡ-580001. ಫೋ:2791616.
ಇವುಗಳನ್ನು ಓದಿದ ನಂತರ ಮೂಲ ಪುಸ್ತಕವನ್ನೂ, ಅವರ ಇತರ ಪುಸ್ತಕಗಳನ್ನೂ , ಕನ್ನಡದ ಇತರ ಪುಸ್ತಕಗಳನ್ನೂ  ಓದಬೇಕೆಂಬ ಅಪೇಕ್ಷೆ ಓದುಗರಲ್ಲಿ ಹುಟ್ಟಲಿ ಎಂಬುದು ನನ್ನ ಅಪೇಕ್ಷೆ. ಹಾಗೆ ಆದೀತು ಎಂಬುದು ನನ್ನ ನಿರೀಕ್ಷೆ.
  • ಸ್ತ್ರೀ ಜಾತಿಯಲ್ಲಿ ದೇವನು ಕುರೂಪಿಗಳನ್ನು ಸೃಷ್ಟಿಸಲೇ ಇಲ್ಲ -  ಕೆಲವರಿಗೆ ಸ್ಫುರದ್ರೂಪಿಯಾಗಿ ಕಾಣಲು ಕಲಿಸಿದ, ಇನ್ನು ಕೆಲವರಿಗೆ ಕಲಿಸಲಿಲ್ಲ.
  • ಸೌಂದರ್ಯ ಕಂಡಿತು, ಗುಣ? ಜಾಣನಿಗೆ ಸುಗುಣವೇ ಸೌಂದರ್ಯ, ಕೋಣನಿಗೆ ಸೌಂದರ್ಯವೇ ಸುಗುಣ. 
  • ಗಂಡನ್ನು ಹಿಡಿದೆಳೆಯುವ ಸೂಜಿಗಲ್ಲು - ಹೆಣ್ಣು. ಗಂಡಿನ ಪಾಲಿಗೆ ಹೆಣ್ಣು ಸೂಜಿಯೂ ಹೌದು. ಕಲ್ಲೂ ಹೌದು. 
  • ಹೆಣ್ಣಿನ ಹಿಂದೆ, ಬಸ್ಸಿನ ಹಿಂದೆ, ಓಡಬೇಡ ಎಂದೊಬ್ಬ ಅನುಭವಸ್ತರು ಹೇಳಿದ್ದಾರೆ. ಯಾಕೆ ಗೊತ್ತೆ? ಎರಡೂ ಧೂಳೆಬ್ಬಿಸಿ ಓಡುತ್ತದೆ.
  • ಹೆಣ್ಣು ಗಂಡಿನ ಪಾಲಿಗೆ ಸರ್ಪವೂ ಹೌದು,  ಸರ್ವವೂ ಹೌದು.
  • ನಿನ್ನ ಕಮಲ ಮಾತು ಮಾತಿಗೂ ನಗುತ್ತಿರುತ್ತಾಳಲ್ಲವೆ? ಹೌದು, ಅದರ ಅರ್ಥ ಅವಳ ಹಲ್ಲು ಸುಂದರವಾಗಿವೆ.
  • ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚ.
  • ಗಂಡನ ಸಂಕಷ್ಟದಲ್ಲಿ ಮರುಗದ ಹೆಂಡತಿಯು ಮಡಿಲಲ್ಲಿ ಕಟ್ಟಿಕೊಂಡ ಬೆಂಕಿ ಇದ್ದಂತೆ. ಬರೀ ಅಷ್ಟೇ ಅಲ್ಲ. ಗಂಡನ  ಆ ಸಂಕಷ್ಟಕ್ಕೂ ಅದೇ ಹೆಂಡತಿಯೇ ಕಾರಣಳಾಗುತ್ತಾಳೆ.
  • ಆಡುವುದು ಮಾಡುವುದು ಗಂಡನ ಕೈಲಿದೆ. ಆಗುವುದು, ಹೋಗುವುದು ಹೆಂಡತಿಯ ಕಾಲಡಿ ಇದೆ
  • ಮದುವೆಯಾದ  ಕೆಲಕಾಲ ಮಾತ್ರವೇ ಹೆಂಡತಿಯ ಮುಖದಲ್ಲಿ ಹೊಳೆದು, ಆ ಕೂಡಲೆ  ಇನ್ನಾರ ಮುಖಕ್ಕೋ ಹಾರುವ  ಮಹಾ ಭೂತಕ್ಕೆ ಸೌಂದರ್ಯ ಎಂಬುದು ಹೆಸರು.
  • ಈ  ಜಗತ್ತಿನ ಕನ್ನೆಗಳೆಲ್ಲವೂ ಒಳ್ಳೆಯವೇ! ಆದರೆ ಕೆಟ್ಟ ಹೆಂಡಂದಿರು ಎಲ್ಲಿಂದ ಬಂದರು ಎಂಬುದೇ ನನ್ನ ಪಾಲಿಗೆ ದೊಡ್ಡ ಶೇಷಪ್ರಶ್ನೆ.
  • ಒಬ್ಬ ಹೆಂಡತಿ ಸಾಕು ಎಂದು ಕಾಯಿದೆ ಹೇಳುತ್ತದೆ - ಏಕೆ ಗೊತ್ತೆ? ಅದಕ್ಕೂ ಕಡಿಮೆ ಇಲ್ಲವಲ್ಲಾ?
ಇವತ್ತಿಗಿಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ. ಧಾಟಿ ಹಿಡಿಯಲು ಕಷ್ಟವೆನಿಸಿದರೆ, ಮೊದಲಿಗೆ - ಮೇಷ್ಟ್ರುಮ, ಹಾಮೂರ್ಖ, ಎಂದುಬೋರ್,  ಡಿನಮೇಲೆ, ಬರೆದವ, ನೀನೇನೋ, ಗುಂಡ  ಹೀಗೆ ಓದಿಕೊಳ್ಳಿ.
ಸತ್ಯ!
"ಮೇಷ್ಟ್ರು ಮಹಾಮೂರ್ಖ ಎಂದು ಬೋರ್ಡಿನ ಮೇಲೆ 
ಬರೆದವ ನೀನೇನೋ ಗುಂಡ?"
"ಹೌದು ಸಾರ್." "ಕೂತುಕೋ, ಸಂತೋಷವಾಯಿತು 
ಸತ್ಯವ ಹೇಳಿದ್ದರಿಂದ"! 
                                                                 ***********

ಶುಕ್ರವಾರ, ಸೆಪ್ಟೆಂಬರ್ 21, 2012

ಬೀchiಯವರ `ಕಮಲೆಯ ಓಲೆಗಳು'(ಪ್ರ: ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ-580001) ಪುಸ್ತಕದಿಂದ -
  • ಮೋಹನ್! ಅವಕಾಶ ಇಲ್ಲದುದಕ್ಕಾಗಿ ಕೆಲವರು ಶ್ರೀರಾಮರು. ಇನ್ನು ಕೆಲವರು ಅವಕಾಶವಿದ್ದರೂ ಧೈರ್ಯವಿಲ್ಲದುದಕ್ಕಾಗಿ ಶ್ರೀರಾಮರು. ಇಂಥವರೆಲ್ಲ ಕೇವಲ ಕಾಯೇನ ಮತ್ತು ವಾಚಾ ಮಾತ್ರ  ಶ್ರೀರಾಮರು. ಅಂದರೆ ಮನಸಾ? 
  • ವಚನದೊಳಗೆಲ್ಲವರು ಶುಚಿ ವೀರ  ಸಾಧುಗಳು
          ಕುಚ, ಶಸ್ತ್ರ, ಹೇಮ ಸೋಂಕಿದರೆ ಲೋಕದೊಳ-
          ಗಚಲದವರಾರು? ಸರ್ವಜ್ಞ
          ಈ ಸತ್ಯೋಕ್ತಿಗೆ ನಾನೂ ನಿಜಕ್ಕೂ ಅಪವಾದವಲ್ಲ ಎಂಬುದನ್ನೊಪ್ಪಿಕೊಂಡೆ.
  • ಬೆಳಿಗ್ಗೆ ರೇಡಿಯೋದಲ್ಲಿ ಇಂದಿನ ಹವಾಮಾನ ಕೇಳಿದ್ದೆ. ಸಂಜೆಗೆ ಮೋಡ ಕವಿದ ವಾತಾವರಣ ಇರಬಹುದು,  ಇಲ್ಲವೆಂದೂ ಇರಬಹುದು. ತುಂತುರು ಮಳೆ ಆಗುವ ಸಂಭವ ಉಂಟು. ಆದರೆ ಮಳೆಯೇ ಆಗದಿರುವ ಸಂಭವವೇ ಹೆಚ್ಚು ಎಂದು ಹೇಳಿದಳು ಆ ರೇಡಿಯೋ ಮಾತೆ.
  • ಆಗಲೆ ಚಿಕ್ಕದಾಗಿ ಸುರುವಾಗಿತ್ತು-ಅತ್ತೆ-ಸೊಸೆಯರ ಜಗಳ. ಜಗಳಕ್ಕೆ ಕಾರಣ ಗೊತ್ತೆ? ಒಂದೇ ಒಂದು ಕಾರಣ-ಅವರಿಬ್ಬರೂ ಅತ್ತೆ ಸೊಸೆಯರು! ಸಾಲದೇ? ಇದೇನು ಸಾಮಾನ್ಯ ಕಾರಣವೇ?
  • ಹೊರಬಂದು ನೋಡಿದೆ, ನನ್ನ ತಾಯಿಯವರು ಗೋಡೆಗೆ ತಲೆ ಹೊಡದುಕೊಳ್ಳುತ್ತಿದ್ದರು. ಏನಾಯಿತೆಂದು ವಿಚಾರಿಸಿದೆ. ಏನೂ ಇಲ್ಲ. ಆದುದು ಇಷ್ಟೆ,
         "ನನ್ನ ದೇವರು ಇಡಬಾರದು ಇನ್ನು." ಎಂದು ನಮ್ಮ ತಾಯಿ ಅಂದರಂತೆ.
        "ನಾನೂ ಅದನ್ನೇ ಅಂಬೋದು" ಎಂದು ನನ್ನ ಹೆಂಡತಿ ಅಂದಳಂತೆ. 'ನನ್ನನ್ನು ಸಾಯಿ ಎಂದಂದಳು  ನಿನ್ನ ಹೆಂಡತಿ'                ಎಂದು ತಾಯಿಯವರ ದೂರು. ಇದಕ್ಕೆ ನನ್ನ ಹೆಂಡತಿಯ ಸಮ್ಜಾಯಿಷಿ ಏನು ಗೊತ್ತೆ?  "ನಾನೂ ಅದನ್ನೇ ಅಂಬೋದು ಅಂದರೆ, ನನ್ನನ್ನೂ ದೇವರು ಇಡಬಾರದು ಇನ್ನು-ಅಂಬೋ ಅರ್ಥದಾಗೆ ನಾನು ಅಂದೆ" ಎಂದವಳ ವಾದ, ಇದನ್ನು ಹೇಗಯ್ಯಾ ಪರಿಹರಿಸುವುದು?
ಇವತ್ತಿಗಿಷ್ಟು. ಇನ್ನು ಸೋಮವಾರ. ರಜಾದಲ್ಲಿ ಕನ್ನಡ ಪುಸ್ತಕ, ಪತ್ರಿಕೆ, ಮ್ಯಾಗಜೀನ್, ಬ್ಲಾಗ್ ಏನಾದರೂ ಓದಿ. Enjoy week end. Enjoy life:)
ಈಗ ನನ್ನ ಒಂದು ಮುಕ್ತಕ:
ಸಾಮರ್ಥ್ಯ 
ತಾನಿಲ್ಲಿದ್ದೇನೆಂದು ತಿಳಿಸಲು ಜನರನು 
ಕಸ್ತೂರಿ ಕರೆಯುವುದಿಲ್ಲ.
ಪರಿಮಳದಿಂದಲೆ ಅವರನು ಸೆಳೆಯುವ 
ಸಾಮರ್ಥ್ಯ ಅದಕಿಹುದಲ್ಲ!
                                                                 -----


ಬುಧವಾರ, ಸೆಪ್ಟೆಂಬರ್ 19, 2012

  • ಸತ್ತ ಮೇಲೆ ಸಿಕ್ಕುವ ಸ್ವರ್ಗಕ್ಕಾಗಿ ಇಂದಿನ ಬಾಳನ್ನು ನರಕಸದೃಶವಾಗಿ ಮಾಡಿಕೊಳ್ಳುವುದು ಬೇಡ. ಇಂದಿನ ಇರುವಿಕೆಯನ್ನು ತಿಳಿವಳಿಕೆಯಿಂದ ತಿದ್ದಿಕೊಂಡರೆ ಇದೇ  ಸ್ವರ್ಗ .
  • ಪ್ರತಿಯೊಬ್ಬನಿಗೂ ಒಂದು ಬಾಳಿನ ತತ್ವ ಬೇಕು. ಮಾನವ ಜೀವನವನ್ನು ಇಂದಿನಕಿಂತಲೂ ಹೆಚ್ಚು ಸುಗಮವನ್ನಾಗಿ, ಆದರ್ಶಪ್ರಾಯವನ್ನಾಗಿ ಮಾಡುವಂತಹ ತತ್ವ ಬೇಕು.
  • ದೇವನಿಗೂ ಒಂದು ಆತ್ಮಗೌರವ ಎಂಬುದಿದೆ. ಬೇರಾವ ಪ್ರಾಣಿಗೂ ಕೊಡಲಾರದಂತಹ ಬುದ್ಧಿಶಕ್ತಿ ಒಂದನ್ನು ದೇವನು ಮಾನವನಿಗೆ ಮಾತ್ರ  ಇತ್ತಿದ್ದಾನೆ. ಇದರ ಸದುಪಯೋಗ ಮಾಡದಿರುವುದೇ ದೈವದ್ರೋಹ.
  • ದೇವನು ಸರ್ವಾಂತರ್ಯಾಮಿ ಮತ್ತು ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎಂಬ ವೇದವಾಕ್ಯವನ್ನು ಎಲ್ಲ ಸೊಸೆಯರೂ ಒಪ್ಪುತ್ತಾರೆ. ಆದರೆ ಎಲ್ಲದರಲ್ಲಿಯೂ ಇರುವ ಅದೇ ದೇವರು ಅದೇಕೆ ತನ್ನ ಅತ್ತೆಯಲ್ಲಿ ಇರುವುದಿಲ್ಲ? ಅತ್ತೆಯೊಡನೆ ಹಣಾಹಣಿ ಜಗಳವಾಡುತ್ತಾಳೆ. ದುಷ್ಟ ಶಬ್ದಗಳಿಂದ ಬೈಯುತ್ತಾಳೆ.
  • " ಕಾಲ ಎಷ್ಟು ಕೆಟ್ಟಿದೆ  ನೋಡಿ, ನಮ್ಮ ಹಿಂದೂ ಸಂಸ್ಕೃತಿಯೇ ಹಾಳಾಗಿಹೋಗಿದೆ,  ಅಲ್ಲಿರುವ ಆ ಇಬ್ಬರಲ್ಲಿ ಗಂಡು ಯಾರು ಹೆಣ್ಣು ಯಾರು ನೀವೇ ಹೇಳಿ ಸಾರ್" ಎಂದಂದೆ.  
          ಒಂದರೆ ನಿಮಿಷ ಆ `ಸಾರ್' ನನ್ನನ್ನು ದುರುಗುಟ್ಟಿ ನೋಡಿತು.
          " ಏನ್ರೀ ನೀವು  ಮಾತನಾಡೋದು?  ಏನು ಮರ್ಯಾದೆ ಎಂಬುದೇ ಇಲ್ಲವೇ? ನನಗೆ ಸಾರ್ ಅಂತೀರಾ ನೀವು? ನಾನು                                                   ಆ ಎರಡೂ ಮಕ್ಕಳ ತಾಯಿ, ತಿಳೀತೆ?"
ಇವತ್ತಿಗೆ ಇಷ್ಟು. ಇನ್ನುಶುಕ್ರವಾರ.  ಈಗ ನನ್ನದೊಂದು ಮುಕ್ತಕ.

ತಲೆಮಾರಿನ ಅಂತರ 
"ಕುಂಟುವುದೇಕಜ್ಜ?" ಕೇಳಿದೆ ತಾತನ 
"ಹೆಬ್ಬುಲಿ ಕಚ್ಚಿತು" ಎಂದ.
ಮೊಮ್ಮಗ ತಿಂಗಳು ಹಾಸಿಗೆ ಹಿಡಿದನು 
ಚಪ್ಪಲಿ ಕಚ್ಚಿದ್ದರಿಂದ!


ಸೋಮವಾರ, ಸೆಪ್ಟೆಂಬರ್ 17, 2012

  • ನಿನಗೆ ನಿನ್ನ ದೇವರೆಂದರೆ ಬಹು ಭಯ, ಭಕ್ತಿ. ನನಗೆ ನನ್ನ ದೇವರೆಂದರೆ ಅತೀವ ಪ್ರೇಮ. ನಾನು ನನ್ನ ದೇವರನ್ನು ನನ್ನನ್ನು ನಾನೇ ಪ್ರೇಮಿಸಿದಷ್ಟೇ ಪ್ರೇಮಿಸುತ್ತೇನೆ. 
  • ನೀನು ನಿನ್ನ ದೇವರಿಗೆ ಅಂಜುತ್ತೀಯಾ, ಲಂಚ ಕೊಟ್ಟು ಸರಿಮಾಡಿಕೊಳ್ಳಲು ನೋಡುತ್ತೀಯಾ! ನಾನು ನಿನ್ನನ್ನು ಕಂಡು ನಗುತ್ತೇನೆ, ನನ್ನ ದೇವರೂ ನಿನ್ನ ದೇವರನ್ನು ಕಂಡು ನಗುತ್ತಾನೆ.
  • ನಾನೆಂದೂ ನಿರೀಶ್ವರವಾದಿ ಅಲ್ಲ, ದೇವರಿಲ್ಲ ಅಂದಿಲ್ಲ, ದೇವರು ಎಂಬ ವಸ್ತು ಒಂದು ಬೇಕೇಬೇಕು. ಒಂದು ವೇಳೆ ಇಲ್ಲದಿದ್ದಲ್ಲಿ ಒಬ್ಬನನ್ನು ಸೃಷ್ಟಿ ಮಾಡಿಕೋ  ಎಂದು ತಿಳಿದವರು ಹೇಳಿದ್ದುಂಟು. ಈ ಮಾತು ನನಗೂ ಒಪ್ಪಿಗೆ. ಏಕೆಂದರೆ ದೇವರು, ಧರ್ಮ ಮುಂತಾದವು ಜನಸಾಮಾನ್ಯರನ್ನು ಅಂಕೆ, ಆತಂಕಗಳಲ್ಲಿ ಹಿಡಿದಿರುತ್ತವೆ. ದುಷ್ಟ ಕಾರ್ಯಗಳಿಂದ ದೂರ ಇಡುತ್ತವೆ. ದೇವರು ಅಂತಹರ ಪಾಲಿಗೆ ಒಂದು ಬೆದರುಗೊಂಬೆ.
  • ಈಗ ನನಗೂ ನಿನಗೂ ಇರುವ ಭೇದ ಇಷ್ಟೇ. ಇದೊಂದೇ. ಬೆದರು ಗೊಂಬೆಯನ್ನು ಕಂಡು ಭಯಪಟ್ಟು ಓಡುವ ಹಕ್ಕಿ ನೀನು. ಇದು ಬರೀ ಬೆದರುಬೊಂಬೆಯೆಂಬುದನ್ನು  ಅರ್ಥ ಮಾಡಿಕೊಂಡು ಅದರ ಎದೆಯಲ್ಲಿಯೇ ಗೂಡು ಮಾಡಿಕೊಂಡು ವಾಸವಾಗಿರುವ ಹಕ್ಕಿ ನಾನು.
ಇವತ್ತಿಗೆ ಇಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ.
ಜಾಗ 
"ಮೂರ್ಖರು ತುಂಬಿಕೊಂಡಿದ್ದಾರೆ ನಿಮ್ಮ  ಈ
ಸಂಘಕೆ  ನಾ ಸೇರಲೆಂತು?"
"ಹಾಗಿದ್ದರೂ ಕೂಡ ಚಿಂತಿಸದಿರಿ ನೀವು 
ಇನ್ನೊಬ್ಬರಿಗೆ ಜಾಗವುಂಟು!"
                                                      -----

ಶುಕ್ರವಾರ, ಸೆಪ್ಟೆಂಬರ್ 14, 2012

  • ಈ ಪದ್ಮಮ್ಮ ವಿಪರೀತ ಪತಿವ್ರತೆ, ಅಥವಾ ಪತಿವೃಥಾ! ಆಕೆಯ ಗಂಡ ಮಾತ್ರ ಸಾಕ್ಷಾತ್ ದೇವರಂಥವನು -ಇದ್ದಾನೆ ಅಂದರೆ ಇದ್ದಾನೆ, ಇಲ್ಲ ಅಂದರೆ ಇಲ್ಲ-ಹಾಗಿದ್ದಾನೆ ಪ್ರಾಣಿ.
  • ನಾನು, ನೀನು, ಈ ವಿಶ್ವದಲ್ಲಿಯ ಯಾವ ಪ್ರಾಣಿಯೂ ಪಾಪಸಂಭವರಲ್ಲ. ಇದನ್ನು ಭದ್ರವಾಗಿ  ನಂಬು.
  • ಹಿಮಾಲಯದ ಶಿಖರದಷ್ಟೆತ್ತರದಲ್ಲಿದ್ದ ಹಿಂದೂ ಧರ್ಮ, ಸಪ್ತ ಸಾಗರಗಳಷ್ಟು ಆಳ, ವಿಸ್ತಾರಗಳಿದ್ದ ಹಿಂದೂ ಧರ್ಮ-ಒಂದು ಧರ್ಮವಾಗಿ ಉಳಿದಿದೆಯೇ?
  • ಇಂದು ಜನತೆಗೆ ದೇವರು ಬೇಕಿಲ್ಲ, ದೇವಾಲಯಗಳು ಬೇಕು. ಮತಾಚರಣೆ , ಗ್ರಂಥಪೂಜೆ ಈ ದನದಂತಹ ಜನತೆಗೆ ಸಾಕೇ ಸಾಕು.
  • ಮಾಧೂ! ನತ್ತು ಕಳೆದಿದೆ, ತೂತು ಉಳಿದಿದೆ-ಆ ತೂತನ್ನೇ ನತ್ತು ಎಂದು ಭ್ರಮಿಸಿ ನಾವಿಂದು ಸಂತೃಪ್ತರಾಗಿ ಕತ್ತೆಯಂತೆ ತಿಪ್ಪೆಯಲ್ಲಿ ಹೊರಳಾಡುತ್ತಿದ್ದೇವೆ.
ಇಂದಿಗಿಷ್ಟು. ಇನ್ನು ನನ್ನದೊಂದು ಮುಕ್ತಕ. ಆತನು, ನಿನಗಿಂದು, ಮೋಸ, ಮಾಡಿದನೇನು, ಹೀಗೆ ವಿಭಾಗ ಮಾಡಿಕೊಂಡು ಓದಿದರೆ ಧಾಟಿ ಹಿಡಿಯಲು ಸುಲಭ.
ಮೋಸ 
ಆತನು ನಿನಗಿಂದು ಮೋಸ ಮಾಡಿದನೇನು? 
ನಾಚಿಕೋಬೇಕಯ್ಯ ಅವನು.
ಆತನೇ ಮತ್ತೊಮ್ಮೆ ಮೋಸ ಮಾಡಿದನೇನು?
ನಾಚಿಕೋಬೇಕಯ್ಯ ನೀನು!
                                                  -----

ಗುರುವಾರ, ಸೆಪ್ಟೆಂಬರ್ 13, 2012

  • ನೀನೀಗ ಡಾಕ್ಟರು! ನೀನು ಡಾಕ್ಟರೇ ?ನಿನ್ನ ಬಳಿ ಔಷಧಿ ತೆಗೆದುಕೊಂಡವರಲ್ಲಿ ಯಾರಾದರೂ ಅಕಸ್ಮಾತ್ತಾಗಿ ಬದುಕಿದ್ದಾರೇನಯ್ಯಾ. 
  • ನೀನಿರುವ   ಆಸ್ಪತ್ರೆಯಲ್ಲಿ  ಔಷಧಿಗಳಿಲ್ಲ ಎಂಬುದೊಂದೇ ನನಗೆ ದೊಡ್ಡ ಸಮಾಧಾನ. ದೇವನು ದಯಾಮಯ-ಇದರಲ್ಲಿ ಮಾತ್ರ.
  • ನನ್ನ ಗೆಳೆಯ ಮೋಹನನ ಗತಿ ಏನಯ್ಯಾ? ಇವನು ಬಹಳ ಬಡವ-ಬರೀ ಬಡವ ಅಂದರೆ ಸಾಲದು, ಕೇವಲ ನಿರ್ಗತಿಕ. ನಿರ್ಗತಿಕ ಅಂದರೂ ಸಾಲದು, ಅವನು ಕವಿ. ಮಾಮೂಲಿ ಕವಿಯಾದರೂ ಅಲ್ಲ. ಪಾಪ! ನವ್ಯ ಕವಿತೆ ಬರೆಯುವ ಕವಿಯಯ್ಯಾ ಅವನು. ಅವನ ಪರಿಸ್ಥಿತಿ ಏನೆಂಬುದು ಅರ್ಥವಾಯಿತೆ ಈಗಲಾದರೂ?
  • ಅವನನ್ನು ಪ್ರೀತಿಸಿದಷ್ಟು ನಾನೀ ಜಗತ್ತಿನಲ್ಲಿ ಮತ್ತಾರನ್ನೂ ಪ್ರೀತಿಸಿಲ್ಲ. ಏಕೆ ಎಂದು ಕೇಳಬೇಡ-ದ್ವೇಷಕ್ಕೆ ಕಾರಣ ಬೇಕು, ಪ್ರೀತಿಗೆ ಬೇಕಿಲ್ಲ.
  • ನಮ್ಮ ಜನಕ್ಕೆ ಇರುವವು ಎರಡೇ ದೇವರುಗಳು-ಶಕ್ತಿ ದೇವರುಗಳು-ಶಕ್ತಿ ಮತ್ತು ಲಕ್ಷ್ಮಿ. ಒಂದು ಅಧಿಕಾರ, ಇನ್ನೊಂದು ಹಣ. ಅಧಿಕಾರ ಹಣವನ್ನು ಗಳಿಸುತ್ತದೆ. ಹಣ ಅಧಿಕಾರವನ್ನು ಗಳಿಸುತ್ತದೆ.
  • ಬಾಪೂಜಿ ಹೇಳಿದ್ದ ಒಂದು ಮಾತನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು-ಕಮ್ಯುನಿಜಂ ಒಳ್ಳೆಯದೇ, ಸೋಷಿಯಲಿಜಂ ಒಳ್ಳೆಯದೇ,   ಡಿಕ್ಟೇಟರ್ ಷಿಪ್ ಒಳ್ಳೆಯದೇ? ಎಂದದಾರೋ ಕೇಳಿದಾಗ ಆ ತಾತ ಹೇಳಿದ್ದರಂತೆ-ಮನುಷ್ಯ ಒಳ್ಳೆಯವನಾಗದಿದ್ದರೆ ಯಾವದೂ ಒಳ್ಳೆಯದಾಗದು ಎಂದು.
ಇವತ್ತಿಗೆ ಇಷ್ಟು.  ಇನ್ನು ಒಂದು ಮುಕ್ತಕ, ನನ್ನಿಂದ.( ಕೈಹಿಡಿ, ದದ್ದೆಲ್ಲ,ನಷ್ಟವಾ, ಗುವುದೆಂದು, ಹೋಗಿದ್ದೆ, ಜೋಯಿಸ, ರಲ್ಲಿ ಹೀಗೆ  ಓದಿಕೊಳ್ಳಿ.)
ಶಾಂತಿ 
ಕೈಹಿಡಿದದ್ದೆಲ್ಲ ನಷ್ಟವಾಗುವುದೆಂದು 
ಹೋಗಿದ್ದೆ ಜೋಯಿಸರಲ್ಲಿ.
ಶಾಂತಿ ಮಾಡಿಸಿಕೊಂಡು ಹಿಂದಕೆ ಬರುವಾಗ 
ಕೊಡೆಯ ಬಿಟ್ಟೆನು ಬಸ್ಸಿನಲ್ಲಿ!
                                                                       ----- 

ಬುಧವಾರ, ಸೆಪ್ಟೆಂಬರ್ 12, 2012

  • ಮಂತ್ರಿಗಳು ಅಂದರೆ ಸರ್ವಜ್ಞರಲ್ಲವೆ ? ಅವರಿಗೆ ಗೊತ್ತಿಲ್ಲದ ವಿಷಯ ಜಗತ್ತಿನಲ್ಲಿ ಯಾವುದಿದೆ? ಅಲ್ಲದೆ ಬಂದ ನಂತರ ಅವರು ಏನಾದರೂ ಪ್ರಶ್ನೆಗಳನ್ನು ಕೇಳಲೇಬೇಕಲ್ಲವೆ ?  
"ನೀವು ಹರ್ನಿಯಾ ಆಪರೇಷನ್ ಹೇಗೆ ಮಾಡುತ್ತೀರಿ?"
"ಲೋಕಲ್ ಅನೆಸ್ತೆeಷಿಯಾ....." 
ಇನ್ನೂ ಡಿ.ಎಂ.ಓ. ಸಾಹೇಬರ ಉತ್ತರ ಬಾಯಲ್ಲಿಯೇ ಇತ್ತು. ಹಸನ್ಮುಖಿಗಳಾದ ಮಂತ್ರಿಗಳು ನುಡಿದರು,
"ದಟ್ ಈಜ್ ವೇರಿ ಗುಡ್! ನಾವು ಯಾವಾಗಲೂ ಲೋಕಲ್ ಪ್ರಾಡ ಕ್ಟ್ಸ್ ಗಳಿಗೆ ಪ್ಯಾಟ್ರಿನೇಟ್ ಮಾಡಬೇಕು." 
  • ಫ್ಯಾಮಿಲಿ ಪ್ಲಾನಿಂಗ್ ಈಗ ಸುರುವಾಗಿದೆ. ಈ ವಿಷಯದಲ್ಲಂತೂ ಲಕ್ಷ್ಮಿ ಬಹಳ ಸ್ಟ್ರಿಕ್ಟ್. ನಮ್ಮ ಬೆಡ್ ರೂಮ್ ನಲ್ಲಿಯೇ  ಗೋಡೆಯ ಮೇಲೆ ಬರೆಯಿಸಿಟ್ಟಿದ್ದಾಳೆ-ಒಂದು ಬೇಕು, ಎರಡು ಸಾಕು, ಮೂರಾದರೆ ಗಂಡನನ್ನು ಬಿಸಾಕು!
        ಇವತ್ತಿಗೆ ಇಷ್ಟು. ಇನ್ನು ನನ್ನ ಒಂದು ಮುಕ್ತಕ:
ದುಷ್ಕೃತ್ಯ 
ಮೀನಿನ ಮೂಟೆಯು ದಾಟಿ ಹೋದರು ಕೂಡ 
ವಾಸನೆ ಬರುವುದು ಹಿಂದೆ.
ಗೈದು ದುಷ್ಕೃತ್ಯವ ಗೆದ್ದೆನೆಂದೆನಬೇಡ 
ಫಲ ಕೂಡಿ ಬರುವುದು ಮುಂದೆ.  
                                                                         ---

ಮಂಗಳವಾರ, ಸೆಪ್ಟೆಂಬರ್ 11, 2012

ಈಗ ಸಾಹಿತ್ಯ ಲೋಕವನ್ನು ಪ್ರವೇಶಿಸೋಣ.  ಮುಂದಿನ ಹೇಳಿಕೆಗಳು ಬೀ chi (ರಾಯಸಂ ಭೀಮಸೇನ ರಾವ್ 1913-1980)  ಅವರ `ಕಮಲೆಯ ಓಲೆಗಳು' ಪುಸ್ತಕದಿಂದ(ಚತುರ್ಥ ಮುದ್ರಣ2010). ಪ್ರಕಾಶಕರು `ಸಮಾಜ ಪುಸ್ತಕಾಲಯ, ಧಾರವಾಡ-580001. ಫೋ:2791616.
ಇವುಗಳನ್ನು ಓದಿದ ನಂತರ ಮೂಲ ಪುಸ್ತಕವನ್ನೂ, ಅವರ ಇತರ ಪುಸ್ತಕಗಳನ್ನೂ , ಕನ್ನಡದ ಇತರ ಪುಸ್ತಕಗಳನ್ನೂ  ಓದಬೇಕೆಂಬ ಅಪೇಕ್ಷೆ ಓದುಗರಲ್ಲಿ ಹುಟ್ಟಲಿ ಎಂಬುದು ನನ್ನ ಅಪೇಕ್ಷೆ. ಹಾಗೆ ಆದೀತು ಎಂಬುದು ನನ್ನ ನಿರೀಕ್ಷೆ.
  • ಕುಡಿಯುವುದೂ ತಪ್ಪಲ್ಲ, ಕಾರ್ ಡ್ರೈವ್  ಮಾಡುವುದೂ ತಪ್ಪಲ್ಲ. ಆದರೆ ಕುಡಿದು ಡ್ರೈವ್ ಮಾಡುವುದು ಮಾತ್ರ ತಪ್ಪು.
  • ಅನೇಕ ಬಾರಿ ಈ ಸಾಹಿತಿಗಳಿಗೆ ಬದುಕಿನಕಿಂತಲೂ ಸಾವೇ ಹೆಚ್ಚು ಸುಖವೆನಿಸುತ್ತದೆ, ಅಗ್ಗವೆನಿಸುತ್ತದೆ.
  • ಅವನು ಸತ್ತರಾಯಿತೇ ? ಹೌದು. ಇವನು ನಿಜವಾಗಿಯೂ ಸತ್ತಿದ್ದಾನೆ ಎಂದು ಹೇಳುವ ಸರ್ವಾಧಿಕಾರ ಡ್ಯೂಟಿ ಡಾಕ್ಟರ್ ಆದ ನನ್ನದಲ್ಲವೇ? ನಾನು ಹೇಳುವವರೆಗೂ ಅವನಿಗೆ ಸಾಯುವ ಹಕ್ಕೂ ಇಲ್ಲ.
  • ಯಾವನಿಗಯ್ಯಾ ಈ ಸರಕಾರ ಕೊಡುವ ಸಂಬಳದಿಂದ ಹೊಟ್ಟೆ ತುಂಬುತ್ತದೆ? ಅದು ದೇವರು ಕೊಟ್ಟದ್ದು. ಇದು ನಮ್ಮ ಬುದ್ಧಿ ಕೊಟ್ಟದ್ದು. ಇರಲಿ ಬಿಡು, ಇದು ಭಾರತ ಅಲ್ಲವೇ? ವಾಚ್ ಮನ್ ನಿಂದ ಹಿಡಿದು ಚೇರ್ ಮನ್ ವರೆಗೂ ನೀತಿ ಒಂದೇ. ರೀತಿಗಳಷ್ಟೆ ಬೇರೆ ಬೇರೆ.  
  • ಅದಕ್ಕಾಗಿ ಎಕ್ಸ್ ರೇ  ಮಾಡತಕ್ಕದ್ದೆಂದು ನಿರ್ಧರಿಸಿದ್ದೇವೆ. ನಿರ್ಧಾರ ಮಾಡುವುದು ನಮ್ಮ ಕೈಯಲ್ಲಿತ್ತು . ಮಾಡಿದೆವು. ಆದರೆ ನಾವು? ನಿರಾಧಾರಿಗಳು.  ನಮ್ಮ ಆಸ್ಪತ್ರೆಯಲ್ಲಿ ಅತ್ಯುತ್ತಮವಾದ ಇಂಪೋರ್ಟೆಡ್ ಎಕ್ಸ್ ರೇ  ಪ್ಲಾಂಟ್ ಇದೆ.  ಬ್ರ್ಯಾಂಡ್ ನ್ಯೂ . ಒಳ್ಳೆಯ ಅನುಭವವುಳ್ಳ ಸೀ ಜನ್ ಡ್  ರೇಡಿಯಾಲಜಿಸ್ಟ್ ಇದ್ದಾರೆ-ವೆಂಕಟರಾಮಯ್ಯ.  ಅಸ್ಸಲು ಫಿಲಂಸ್ ಇಲ್ಲ. ಯಾಕಿಲ್ಲ? ಸಪ್ಲೈ ಇಲ್ಲ. ಆರು ತಿಂಗಳಿಂದ! ಸಪ್ಲೈ ಯಾಕಿಲ್ಲ? ಒಂದೇ ಉತ್ತರ-ಇದು ಗವರ್ನಮೆಂಟ್ ಆಸ್ಪತ್ರೆ ಸಾರ್!
  • ಒಂದು ಮಾತು-ನೀನು ಯಾರ ಮುಂದೂ ಹೇಳಬೇಡ. ಒಂದು ವೇಳೆ ಹೇಳಿದರೂ ನಾನು ಹೇಳಿದೆ ಎಂದು ಮಾತ್ರ ಮೊದಲೇ ಹೇಳಬೇಡ. ಇಲ್ಲಿಗೆ ಬಂದವರಲ್ಲಿ ಸತ್ತವರು ಶೇಕಡಾ ಕೇವಲ ನೂರೇ ನೂರು. ಈ ನೂರರಲ್ಲಿ ಔಷಧಿ ಇಲ್ಲದೆ ಸತ್ತವರು ಶೇಕಡಾ ಎಂಭತ್ತು. ಇನ್ನಿಪ್ಪತ್ತು ತಪ್ಪು ಔಷಧಿ ಸೇವನೆಯಿಂದ. ಈ ಆಸ್ಪತ್ರೆಯಲ್ಲಿ ನಿನ್ನ ಮಿತ್ರ ಬದುಕಬೇಕು. ಆಗಲಿ, ದೇವರಿದ್ದಾನೆ.        
         ಇವತ್ತಿಗೆ ಇಷ್ಟು. 

ಈಗ ನನ್ನದೊಂದು ಮುಕ್ತಕ: ಮೊದಲ ಬಾರಿಗೆ ಓದುವಾಗ, ಯಾಲಕ್ಕಿ, ಮೂಟೆಯು, ದಾಟಿ ಹೋ , ದರುಕೂಡ , ಹೀಗೆ ವಿಭಾಗ ಮಾಡಿಕೊಂಡು ಓದಿದರೆ ಸರಾಗ.

ಸತ್ಕಾರ್ಯ 
ಯಾಲಕ್ಕಿ ಮೂಟೆಯು ದಾಟಿ ಹೋದರು ಕೂಡ 
ಪರಿಮಳ ಉಳಿವುದು ಹಿಂದೆ.
ಗೈದ  ಸತ್ಕಾರ್ಯಕೆ ಫಲವಿಲ್ಲ ಎನಬೇಡ 
ಅದು ಕೂಡಿ ಬರುವುದು ಮುಂದೆ.
                                                   ---
       


ಸೋಮವಾರ, ಸೆಪ್ಟೆಂಬರ್ 10, 2012



ಶುಂಠಿ ಬೆಲ್ಲದ ಬಟ್ಟಲು,  ನಿಮ್ಮ ಮುಂದೆ-

ನಾನು ಆರಂಭಿಸುತ್ತಿರುವ  ಈ ಬ್ಲಾಗಿಗೆ ತಮಗೆ ಆತ್ಮೀಯ  ಸ್ವಾಗತ. ನಾನು ಈ ಹಿಂದೆ ಆರಂಭಿಸಿದ್ದ ಕೆಲವು ಬ್ಲಾಗುಗಳನ್ನು ಕಾರಣಾಂತರಗಳಿಂದ ನಿಲ್ಲಿಸಬೇಕಾಯಿತು. ಆ ಬಗ್ಗೆ ಕ್ಷಮೆ ಕೋರುತ್ತೇನೆ.
ಶೀರ್ಷಿಕೆಯಿಂದ  ಭಾಸವಾಗುವಂತೆ ಇದು ಹಳ್ಳಿ ಮದ್ದಿನ ಬಗ್ಗೆ ಇರುವ ಬ್ಲಾಗಲ್ಲ. ಶುಂಠಿ ನಾಲಿಗೆಗೆ ಖಾರ. ಶರೀರಕ್ಕೆ ಹಿತಕಾರಿ. ಬೆಲ್ಲ  ನಾಲಿಗೆಗೂ ಮಧುರ, ತಿನ್ನುವವರಿಗೂ ಸಂತೋಷದಾಯಕ. ನಮ್ಮ ಸಾಹಿತ್ಯ ಲೋಕದಲ್ಲಿ ಶುಂಠಿಯೂ ಬೆಲ್ಲವೂ ಸಾಕಷ್ಟಿವೆ. ನಾನು ಅಂಥವನ್ನು ಸವಿದಾಗಲೆಲ್ಲ ಬೇರೆಯವರೂ ಇದನ್ನು ಆಸ್ವಾದಿಸಲಿ ಎಂಬ ಅಪೇಕ್ಷೆ ಹುಟ್ಟಿದ್ದರಿಂದ ಈ ಬ್ಲಾಗು ಹುಟ್ಟಿಕೊಂಡಿತು.

ಮೊದಲಿಗೆ ನಾನೇ ರಚಿಸಿರುವ ಒಂದು ಮುಕ್ತಕ. ಇದನ್ನು ಒಂದು ಬೆಲ್ಲದ ಚೂರೆಂದು ಸ್ವೀಕರಿಸಿ.
ಇದನ್ನು ಮೊದಲ ಬಾರಿ ಓದುವಾಗ, ಮಾತೊಂದ, ರಿಂದಲೆ, ಕೆಲಸ, ವಾಗುವ ವೇಳೆ, ಎರಡನೆ, ಮಾತನು, ಉಳಿಸು.  ಹೀಗೆ ವಿಭಾಗ ಮಾಡಿಕೊಂಡು ಓದಿದರೆ  ಓದಲು ಸಲೀಸಾಗುತ್ತದೆ.
ಮಾತು-ಮೌನ 
ಮಾತೊಂದರಿಂದಲೆ ಕೆಲಸವಾಗುವ ವೇಳೆ
ಎರಡನೆ ಮಾತನು ಉಳಿಸು.
ಮೌನದಿಂದಲೆ ಕಾರ್ಯ ಸಾಗುತಲಿರುವಾಗ
ಮಾತಾಡದಿರುವುದೆ ಲೇಸು.

ಇನ್ನು ಸಾಹಿತ್ಯಲೋಕವನ್ನು ಪ್ರವೇಶಿಸೋಣ.