ಸೋಮವಾರ, ಸೆಪ್ಟೆಂಬರ್ 24, 2012

ಮುಂದಿನ ಹೇಳಿಕೆಗಳು ಬೀ chi (ರಾಯಸಂ ಭೀಮಸೇನ ರಾವ್ 1913-1980)  ಅವರ `ಕಮಲೆಯ ಓಲೆಗಳು' ಪುಸ್ತಕದಿಂದ(ಚತುರ್ಥ ಮುದ್ರಣ2010). ಪ್ರಕಾಶಕರು `ಸಮಾಜ ಪುಸ್ತಕಾಲಯ, ಧಾರವಾಡ-580001. ಫೋ:2791616.
ಇವುಗಳನ್ನು ಓದಿದ ನಂತರ ಮೂಲ ಪುಸ್ತಕವನ್ನೂ, ಅವರ ಇತರ ಪುಸ್ತಕಗಳನ್ನೂ , ಕನ್ನಡದ ಇತರ ಪುಸ್ತಕಗಳನ್ನೂ  ಓದಬೇಕೆಂಬ ಅಪೇಕ್ಷೆ ಓದುಗರಲ್ಲಿ ಹುಟ್ಟಲಿ ಎಂಬುದು ನನ್ನ ಅಪೇಕ್ಷೆ. ಹಾಗೆ ಆದೀತು ಎಂಬುದು ನನ್ನ ನಿರೀಕ್ಷೆ.
  • ಸ್ತ್ರೀ ಜಾತಿಯಲ್ಲಿ ದೇವನು ಕುರೂಪಿಗಳನ್ನು ಸೃಷ್ಟಿಸಲೇ ಇಲ್ಲ -  ಕೆಲವರಿಗೆ ಸ್ಫುರದ್ರೂಪಿಯಾಗಿ ಕಾಣಲು ಕಲಿಸಿದ, ಇನ್ನು ಕೆಲವರಿಗೆ ಕಲಿಸಲಿಲ್ಲ.
  • ಸೌಂದರ್ಯ ಕಂಡಿತು, ಗುಣ? ಜಾಣನಿಗೆ ಸುಗುಣವೇ ಸೌಂದರ್ಯ, ಕೋಣನಿಗೆ ಸೌಂದರ್ಯವೇ ಸುಗುಣ. 
  • ಗಂಡನ್ನು ಹಿಡಿದೆಳೆಯುವ ಸೂಜಿಗಲ್ಲು - ಹೆಣ್ಣು. ಗಂಡಿನ ಪಾಲಿಗೆ ಹೆಣ್ಣು ಸೂಜಿಯೂ ಹೌದು. ಕಲ್ಲೂ ಹೌದು. 
  • ಹೆಣ್ಣಿನ ಹಿಂದೆ, ಬಸ್ಸಿನ ಹಿಂದೆ, ಓಡಬೇಡ ಎಂದೊಬ್ಬ ಅನುಭವಸ್ತರು ಹೇಳಿದ್ದಾರೆ. ಯಾಕೆ ಗೊತ್ತೆ? ಎರಡೂ ಧೂಳೆಬ್ಬಿಸಿ ಓಡುತ್ತದೆ.
  • ಹೆಣ್ಣು ಗಂಡಿನ ಪಾಲಿಗೆ ಸರ್ಪವೂ ಹೌದು,  ಸರ್ವವೂ ಹೌದು.
  • ನಿನ್ನ ಕಮಲ ಮಾತು ಮಾತಿಗೂ ನಗುತ್ತಿರುತ್ತಾಳಲ್ಲವೆ? ಹೌದು, ಅದರ ಅರ್ಥ ಅವಳ ಹಲ್ಲು ಸುಂದರವಾಗಿವೆ.
  • ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚ.
  • ಗಂಡನ ಸಂಕಷ್ಟದಲ್ಲಿ ಮರುಗದ ಹೆಂಡತಿಯು ಮಡಿಲಲ್ಲಿ ಕಟ್ಟಿಕೊಂಡ ಬೆಂಕಿ ಇದ್ದಂತೆ. ಬರೀ ಅಷ್ಟೇ ಅಲ್ಲ. ಗಂಡನ  ಆ ಸಂಕಷ್ಟಕ್ಕೂ ಅದೇ ಹೆಂಡತಿಯೇ ಕಾರಣಳಾಗುತ್ತಾಳೆ.
  • ಆಡುವುದು ಮಾಡುವುದು ಗಂಡನ ಕೈಲಿದೆ. ಆಗುವುದು, ಹೋಗುವುದು ಹೆಂಡತಿಯ ಕಾಲಡಿ ಇದೆ
  • ಮದುವೆಯಾದ  ಕೆಲಕಾಲ ಮಾತ್ರವೇ ಹೆಂಡತಿಯ ಮುಖದಲ್ಲಿ ಹೊಳೆದು, ಆ ಕೂಡಲೆ  ಇನ್ನಾರ ಮುಖಕ್ಕೋ ಹಾರುವ  ಮಹಾ ಭೂತಕ್ಕೆ ಸೌಂದರ್ಯ ಎಂಬುದು ಹೆಸರು.
  • ಈ  ಜಗತ್ತಿನ ಕನ್ನೆಗಳೆಲ್ಲವೂ ಒಳ್ಳೆಯವೇ! ಆದರೆ ಕೆಟ್ಟ ಹೆಂಡಂದಿರು ಎಲ್ಲಿಂದ ಬಂದರು ಎಂಬುದೇ ನನ್ನ ಪಾಲಿಗೆ ದೊಡ್ಡ ಶೇಷಪ್ರಶ್ನೆ.
  • ಒಬ್ಬ ಹೆಂಡತಿ ಸಾಕು ಎಂದು ಕಾಯಿದೆ ಹೇಳುತ್ತದೆ - ಏಕೆ ಗೊತ್ತೆ? ಅದಕ್ಕೂ ಕಡಿಮೆ ಇಲ್ಲವಲ್ಲಾ?
ಇವತ್ತಿಗಿಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ. ಧಾಟಿ ಹಿಡಿಯಲು ಕಷ್ಟವೆನಿಸಿದರೆ, ಮೊದಲಿಗೆ - ಮೇಷ್ಟ್ರುಮ, ಹಾಮೂರ್ಖ, ಎಂದುಬೋರ್,  ಡಿನಮೇಲೆ, ಬರೆದವ, ನೀನೇನೋ, ಗುಂಡ  ಹೀಗೆ ಓದಿಕೊಳ್ಳಿ.
ಸತ್ಯ!
"ಮೇಷ್ಟ್ರು ಮಹಾಮೂರ್ಖ ಎಂದು ಬೋರ್ಡಿನ ಮೇಲೆ 
ಬರೆದವ ನೀನೇನೋ ಗುಂಡ?"
"ಹೌದು ಸಾರ್." "ಕೂತುಕೋ, ಸಂತೋಷವಾಯಿತು 
ಸತ್ಯವ ಹೇಳಿದ್ದರಿಂದ"! 
                                                                 ***********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ