ಸೋಮವಾರ, ಸೆಪ್ಟೆಂಬರ್ 17, 2012

  • ನಿನಗೆ ನಿನ್ನ ದೇವರೆಂದರೆ ಬಹು ಭಯ, ಭಕ್ತಿ. ನನಗೆ ನನ್ನ ದೇವರೆಂದರೆ ಅತೀವ ಪ್ರೇಮ. ನಾನು ನನ್ನ ದೇವರನ್ನು ನನ್ನನ್ನು ನಾನೇ ಪ್ರೇಮಿಸಿದಷ್ಟೇ ಪ್ರೇಮಿಸುತ್ತೇನೆ. 
  • ನೀನು ನಿನ್ನ ದೇವರಿಗೆ ಅಂಜುತ್ತೀಯಾ, ಲಂಚ ಕೊಟ್ಟು ಸರಿಮಾಡಿಕೊಳ್ಳಲು ನೋಡುತ್ತೀಯಾ! ನಾನು ನಿನ್ನನ್ನು ಕಂಡು ನಗುತ್ತೇನೆ, ನನ್ನ ದೇವರೂ ನಿನ್ನ ದೇವರನ್ನು ಕಂಡು ನಗುತ್ತಾನೆ.
  • ನಾನೆಂದೂ ನಿರೀಶ್ವರವಾದಿ ಅಲ್ಲ, ದೇವರಿಲ್ಲ ಅಂದಿಲ್ಲ, ದೇವರು ಎಂಬ ವಸ್ತು ಒಂದು ಬೇಕೇಬೇಕು. ಒಂದು ವೇಳೆ ಇಲ್ಲದಿದ್ದಲ್ಲಿ ಒಬ್ಬನನ್ನು ಸೃಷ್ಟಿ ಮಾಡಿಕೋ  ಎಂದು ತಿಳಿದವರು ಹೇಳಿದ್ದುಂಟು. ಈ ಮಾತು ನನಗೂ ಒಪ್ಪಿಗೆ. ಏಕೆಂದರೆ ದೇವರು, ಧರ್ಮ ಮುಂತಾದವು ಜನಸಾಮಾನ್ಯರನ್ನು ಅಂಕೆ, ಆತಂಕಗಳಲ್ಲಿ ಹಿಡಿದಿರುತ್ತವೆ. ದುಷ್ಟ ಕಾರ್ಯಗಳಿಂದ ದೂರ ಇಡುತ್ತವೆ. ದೇವರು ಅಂತಹರ ಪಾಲಿಗೆ ಒಂದು ಬೆದರುಗೊಂಬೆ.
  • ಈಗ ನನಗೂ ನಿನಗೂ ಇರುವ ಭೇದ ಇಷ್ಟೇ. ಇದೊಂದೇ. ಬೆದರು ಗೊಂಬೆಯನ್ನು ಕಂಡು ಭಯಪಟ್ಟು ಓಡುವ ಹಕ್ಕಿ ನೀನು. ಇದು ಬರೀ ಬೆದರುಬೊಂಬೆಯೆಂಬುದನ್ನು  ಅರ್ಥ ಮಾಡಿಕೊಂಡು ಅದರ ಎದೆಯಲ್ಲಿಯೇ ಗೂಡು ಮಾಡಿಕೊಂಡು ವಾಸವಾಗಿರುವ ಹಕ್ಕಿ ನಾನು.
ಇವತ್ತಿಗೆ ಇಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ.
ಜಾಗ 
"ಮೂರ್ಖರು ತುಂಬಿಕೊಂಡಿದ್ದಾರೆ ನಿಮ್ಮ  ಈ
ಸಂಘಕೆ  ನಾ ಸೇರಲೆಂತು?"
"ಹಾಗಿದ್ದರೂ ಕೂಡ ಚಿಂತಿಸದಿರಿ ನೀವು 
ಇನ್ನೊಬ್ಬರಿಗೆ ಜಾಗವುಂಟು!"
                                                      -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ