ಶುಕ್ರವಾರ, ನವೆಂಬರ್ 30, 2012


ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
  • ಆದಕಾರಣ ನಮ್ಮ ಭಾರತ ಪವಿತ್ರವಾದ ದೇಶ ಎಂಬುದು ಒಂದು ವಾದ.
  • ನೆಲವನ್ನು ಮುಗಿಲನ್ನು ಹೊಲಿವರುoಟೆಂದವರ । ಹೊಲಿದರೂ ಹೊಲೆವರೆನಬೇಕು ಮೂರ್ಖನಲಿ । ಕಲಹವೇ ಬೇಡ ಸರ್ವಜ್ಞ ।। ಎಂದು ಸರ್ವಜ್ಞ  ಕವಿ ಹೇಳಿಲ್ಲವೇ?
  • ಯಾವಾಗ ಧರ್ಮ ಖಿಲವಾಗುತ್ತದೋ, ಅಧರ್ಮ ಪ್ರಬಲವಾಗುತ್ತದೋ ಆವಾಗ ನಾನು ಸಾಧುಗಳ ರಕ್ಷಣೆ, ಧರ್ಮದ ಪುನರುದ್ಧಾರಗಳಿಗಾಗಿ ಯುಗ-ಯುಗದಲ್ಲೂ ಹುಟ್ಟುತ್ತೇನೆ. ಹಾಗಾದರೆ ಧರ್ಮಕ್ಕೆ ಚ್ಯುತಿ ಬರದಿದ್ದಲ್ಲಿ ಭಗವಂತ ಅವತರಿಸುವುದಿಲ್ಲ ಎಂದಂತಾಯಿತು. ಭಗವಂತ ನಮ್ಮ ಭಾರತದಲ್ಲಿಯೇ ತನ್ನ ದಶಾವತಾರಗಳನ್ನು ಎತ್ತಿದ...... ಎಂಬುದರ ಅರ್ಥ, ಹತ್ತು ಬಾರಿಯೂ ಈ ಭಾರತದಲ್ಲಿಯೇ ಧರ್ಮಕ್ಕೆ ಧಕ್ಕೆ ಬಂತು ಎಂದು ಗ್ರಹಿಸೋಣವೇ? ಬೇರಾವ ಯುರೋಪಿಯನ್ ರಾಷ್ಟ್ರದಲ್ಲಿಯಾಗಲಿ, ಆಫ್ರಿಕಾ, ರಸಿಯಾಗಳಲ್ಲಿ ಧರ್ಮಗ್ಲಾನಿ ಆಗಲೇ ಇಲ್ಲ. ನಮ್ಮ ಭಾರತದಲ್ಲಿಯೇ ಆಯಿತು ಎಂದೊಂದು ಕಾರಣದಿಂದ ನಮ್ಮ ದೇಶ ಪವಿತ್ರವಾದ ದೇಶ, ನಮ್ಮದು ಪುಣ್ಯಭೂಮಿ ಎಂದು ಹೇಳಿಕೊಳ್ಳುವುದು ಸರಿಯೇ, ಜಾಣತನವೇ ಅಥವಾ ಹೆಮ್ಮೆಪಟ್ಟುಕೊಳ್ಳುವಂತಹ ಅಂಶವೇ?
  • ಇದನ್ನು ಹೆಮ್ಮೆಪಟ್ಟುಕೊಳ್ಳುವಂತಹ ವಿಷಯ ಎಂದಾದಲ್ಲಿ, ನಮ್ಮಲ್ಲಿಂದ ಅನೇಕರು ಧರ್ಮವನ್ನು ಹಾಳುಮಾಡುವುದರಲ್ಲಿ ತೊಡಗಿರುವಾಗ, ಅವರೆಲ್ಲರೂ ಮೇಲಿಂದಮೇಲೆ ಪರಮಾತ್ಮನ ಅವತಾರಕ್ಕೆ ಆಸ್ಪದ ಮಾಡಿಕೊಟ್ಟು, ನಮ್ಮ ದೇಶವನ್ನು ಇನ್ನೂ ಹೆಚ್ಚು ಪವಿತ್ರಗೊಳಿಸುತ್ತಿದ್ದಾರೆ, ಉಪಕರಿಸುತ್ತಿದ್ದಾರೆ ಎಂದಾಯಿತು. ಅವರೆಲ್ಲರಿಗೂ ನಾವು ಋಣಿಗಳು!
  • ನಮ್ಮೂರಲ್ಲಿ ಪೋಲಿಸ್ ಸ್ಟೇಶನ್ ಆಗಿದೆ ಎಂದು ಹೆಮ್ಮೆಪಟ್ಟುಕೊಳ್ಳುವುದರಲ್ಲಿ ಎಷ್ಟು ಅರ್ಥವಿದೆಯೋ, ನಮ್ಮ ಭಾರತದಲ್ಲಿಯೇ ದೇವರು ದಶಾವತಾರಗಳನ್ನೂ ಮಾಡಿದ್ದಾನೆ ಎಂದು ಹೆಮ್ಮೆಪಟ್ಟುಕೊಳ್ಳುವುದರಲ್ಲೂ ಅಷ್ಟೇ ಅರ್ಥವಿದೆ. 
  • ಈಗ ಯೋಚಿಸಿ, ನಮ್ಮ ಭಾರತ ಪುಣ್ಯಭೂಮಿಯೇ? ಪವಿತ್ರದೇಶವೇ?
ಈಗ ನನ್ನ ಮುಕ್ತಕ.

ಹೋಟೆಲಿನಲ್ಲಿ 
"ಮರೆವಾಯ್ತೆ ಸಾರ್?" ಪ್ರೊಫೆಸರರ ಕೇಳಿದ ಮಾಣಿ,
 "ಇಲ್ಲ, ಬಕ್ಷೀಸ್ ಕೊಟ್ಟೆನಲ್ಲ."
"ಸರಿ ಸ್ವಾಮಿ ಬಕ್ಷೀಸು ಕೊಟ್ಟಿರಿ, ಆದರೆ
ತಿಂಡಿಯನೇ  ತಿನ್ನಲಿಲ್ಲ!"
                                                                     * * * * * * * * * *

ಶುಕ್ರವಾರ, ನವೆಂಬರ್ 23, 2012


ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!

  • ಅಣ್ಣ ಅ.ನ.ಕೃ.
  •  ಕೃಷ್ಣರಾಯರು ಭಾರತದ ಆಚೆ ಹೋಗಲಿಲ್ಲ ಮಾತ್ರವಲ್ಲ, ದಿಲ್ಲಿಗೂ ಹೋಗಲಿಲ್ಲ.
  • ಜೀವನವೇ ಹೀಗೆ. ಏನೂ ಅರ್ಥವಾಗದ ಅನೇಕ ಶ್ರೀಮಂತರು ಸ್ವಂತ ಖರ್ಚಿನಲ್ಲಿ ಎಲ್ಲ ದೇಶಗಳನ್ನೂ ಸುತ್ತಾಡಿ ಬರುತ್ತಾರೆ. ಅವರು ಇಲ್ಲಿಂದ ಒಯಿದುದು ಏನೂ ಇಲ್ಲ, ಅಲ್ಲಿಂದ ತಂದುದೂ ಏನೂ ಇಲ್ಲ- ಸುಂಕವನ್ನು ತಪ್ಪಿಸಿ ತಂದ ಕೆಲ ಕಳ್ಳ ವಿದೇಶೀ ವಸ್ತುಗಳ ಹೊರತು.
  • ಯಾರದೋ ತಪ್ಪಿನಿಂದ ಅಧಿಕಾರಕ್ಕೆ ಬಂದ ರಾಜಕೀಯ ಪ್ರಭುಗಳೂ ಆ ಸಮ್ಮೇಳನ, ಈ ಸಮ್ಮೇಳನ ಎಂದು ವಿದೆಶಗಳಿಗೆಲ್ಲ ಹೋಗುತ್ತಿದ್ದಾರೆ. ದಡ್ಡ ಶ್ರೀಮಂತರಂತೆ ಸ್ವಂತ ಖರ್ಚಿನಲ್ಲಲ್ಲ. ಬಡ ಜನತೆಯ ಸ್ವಂತ ಖರ್ಚಿನಲ್ಲಿ.
  • ಅವರಲ್ಲಿ ಅನೇಕರು ಇಲ್ಲಿಂದ ಒಯಿದುದೇನು? ಅಲ್ಲಿಂದ ತಂದುದೇನು? ಅಲ್ಲಿ ಹೆಚ್ಚಾಗಿ ಕುಡಿದು, ಹೋಗಿದ್ದ ಸಮ್ಮೇಳನವನ್ನು ಹಾಯಾಗಿ ಮರೆತು ಮಲಗಿ, ಎಚ್ಚರವಾದಾಗ ಎದ್ದು ಬಂದಿದ್ದಾರೆ.
  • ಮರಳಿ ಬಂದಿದ್ದಾರೆ ಎಂಬುದಕ್ಕೆ ಸಂತೋಷಪಡಬೇಕು. ಯಾರು? ಸಂತೋಷಪಡಬೇಕಾದುದು ನಮ್ಮ ದೇಶವಲ್ಲ. ಅವರವರ ಮನೆಯವರು.
  • ಎಲ್ಲ ಖರ್ಚುಗಳನ್ನು ಭರಿಸುತ್ತೇವೆ, ಬನ್ನಿ ಎಂದು ಕರೆದರೂ ಕನ್ನಡ ಹಿರಿ ಸಾಹಿತಿ ಕೃಷ್ಣರಾಯರಿಗೆ ಹೋಗಲು ಅನುವು ಇಲ್ಲ. ಖರ್ಚು ಕಳೆದರೆ ಆಯಿತೆ? ಅನ್ನದ ತಪ್ಪೇಲಿಗೆ ದುಡಿಯಬೇಡವೇ? ಇದು ನಮ್ಮ ಕನ್ನಡ ಸಾಹಿತಿಗಳ ಆರ್ಥಿಕ ಪರಿಸ್ಥಿತಿ.
  • ಅಂತೂ ಕಡಲೆ ಇರುವವರಿಗೆ ಹಲ್ಲಿಲ್ಲ, ಹಲ್ಲಿದ್ದವರಿಗೆ ಕಡಲೆ ಇಲ್ಲ.
ಈಗ ನನ್ನ ಮುಕ್ತಕ.
ಹೋಟೆಲಿನಲ್ಲಿ.
"ಸೀಮೆ ಎಣ್ಣೆಯ ನಾತ ಬರುತಿದೆಯಲ್ಲಯ್ಯ,
ಚಹವೇನು ನೀನು ಕೊಟ್ಟದ್ದು?"
"ಅಲ್ಲ ಸಾರ್ ಅದು ಕಾಪಿ, ಚಹವಾಗಿದ್ದರೆ ಕೆಟ್ಟ 
ಹರಳೆಣ್ಣೆ  ನಾತ ಬರುತಿತ್ತು"!
                                                     * * * * * * * * *


ಶುಕ್ರವಾರ, ನವೆಂಬರ್ 16, 2012

ಇಂದಿನ ಬ್ಲಾಗು ಬರೆಯಲು ಸಾಧ್ಯವಾಗಿಲ್ಲ. ದಯವಿಟ್ಟು ಕ್ಷಮಿಸಿ.
ನನ್ನ ಮುಕ್ತಕ:

ಕುಟುಂಬ ಯೋಜನೆ!
ಅರುವತ್ತು ವರ್ಷದ ಮುದುಕನ ಕೈಯಲಿ
ಎರಡು ತಿಂಗಳ ಕೂಸ ಕಂಡು
"ಮಗನೇನು?" ಎಂದಾಗ ಹೇಳಿದನಾತನು
"ಅಲ್ಲ ಸ್ವಾಮೀ, ತಮ್ಮ " ಎಂದು!

ಶುಕ್ರವಾರ, ನವೆಂಬರ್ 9, 2012

ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
  • ಪಿಂಚನಿಯಾದವನಿಗೆ ಎಲ್ಲ ವಾರಗಳೂ ಭಾನುವಾರಗಳೇ. ಶನಿವಾರ ಎಂಬುದು ನೆನಪಿರಲು ವಿಶೇಷ ಕಾರಣ ಬೇಕು.
  • ಮನದಲ್ಲಿದ್ದುದನ್ನೂ ಆಡಲು ಅಡ್ಡ ಬರುವುದು ಸಂಸ್ಕೃತಿ. ಸಂಸ್ಕೃತಿಯೂ ಒಂದು ಬಗೆಯ ಹೇಡಿತನವೆಂದು ಅದಾರೋ ಒಬ್ಬ ಇಂಗ್ಲಿಷ್ ಸಾಹಿತಿ ಹೇಳಿದ್ದಾನೆ.
  • ಆದರೂ ರಸಿಯಾ ನನಗೆ ಹೊಸತೆ? ಶಾಲೆಯಲ್ಲಿದ್ದಾಗ ಎಷ್ಟೋ ಬಾರಿ ನೋಡಿದ್ದೇನೆ-ಭೂಪಟದಲ್ಲಿ!
  • ತಾಳಿ ಕಟ್ಟುವಾಗ ವರನಿಗೆ ಯೋಚನೆ ಮಾಡಲು ಆಸ್ಪದ ಕೊಡುತ್ತಾರೆಯೇ? ಯೋಚಿಸಲು ಸಾಧ್ಯವಾಗಬಾರದೆಂದೇ  ದೊಡ್ಡ ಕಂಠದಲ್ಲಿ ಮಂತ್ರ ಘೋಷಣೆ ಮಾಡುವುದು.
  • ಆಮೇಲೆ ಓಲಗ. ಯುದ್ಧದಲ್ಲಿ ಬ್ಯಾಂಡು ಬಾರಿಸುವುದೂ ಅದಕ್ಕೇ. ಮುನ್ನುಗ್ಗುವುದೊಂದೇ ಯೋಧನ ಕೆಲಸ.
  • ನಾನು ಧಾರಾಳವಾಗಿ ಕುಡಿಯುತ್ತಿದ್ದ ಕಾಲವದು. ಬಹು ಹಿಂದೇನಲ್ಲ, ಕೇವಲ ಒಂದೂವರೆ ವರ್ಷಗಳ ಹಿಂದು. ಆಗ ಬರಬಾರದಿತ್ತೇ ಈ ರಸಿಯಾ ಪ್ರವಾಸಯೋಗ? ಓಡ್ಕಾಕ್ಕೇ ಪುಣ್ಯವಿಲ್ಲ ನನ್ನ ಹೊಟ್ಟೆಯಲ್ಲಿ ಬರಲು. ಈಗ ಇಷ್ಟು ತಡವಾಗಿ ಬಂದಿದೆ ಓಡ್ಕಾ ದೇಶಕ್ಕೆ ಔತಣ.
ಈಗ ನನ್ನ ಮುಕ್ತಕ.

ದೂರು
"ರವಿ ನನ್ನ ಗೊಂಬೆಯ ಒಡೆದನು ನೋಡಮ್ಮ"
"ಹೇಗೆ ಒಡೆದನಪ್ಪ ಹೇಳು"
"ಅವನ ಬೆನ್ನಿಗೆ ನಾನು ಇದರಿಂದ ಹೊಡೆದಾಗ 
ಆಯ್ತಿದು ನಾಲ್ಕಾರು ಹೋಳು"!

ಶುಕ್ರವಾರ, ನವೆಂಬರ್ 2, 2012


ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
  • ಇಲ್ಲಿ ನೋಡಿ! ಕ್ಷಯರೋಗದಿಂದ ಕ್ಯಾನ್ಸರ್ ರೋಗದಿಂದ ಸತ್ತವರು ಬಹಳ ಸ್ವಲ್ಪ ಸ್ವಾಮೀ! ಎಲ್ಲಿಯೋ ನೂರಕ್ಕೆ ಒಬ್ಬರೋ ಇಬ್ಬರೋ ಈ ರೋಗದಿಂದ ಸತ್ತಿರಬೇಕಷ್ಟೆ. ಉಳಿದ ತೊಂಭತ್ತೆಂಟು ತೊಂಭತ್ತೊಂಭತ್ತು ಜನ ಬರೀ ರೋಗದ ಹೆಸರನ್ನು ಕೇಳಿಯೇ ಸತ್ತಿದ್ದಾರೆ.
  • ನಾಲಗೆಗೆ ರಜಕೊಟ್ಟು, ಕಿವಿಗೆ ಕೆಲಸವನ್ನು ಕೊಟ್ಟೆ. ಇದು ಸಾಧಾರಣವಾಗಿ ಅನೇಕರಿಗೆ ಸಾಧಿಸಲು ಕಷ್ಟವಾದ ಕೆಲಸ ಅಲ್ಲವೆ?
  • ನನ್ನನ್ನು ಆ ಆಸ್ಪತ್ರೆಯಲ್ಲಿ ಹೇಗೆ ನೋಡಿಕೊಂಡರು ಎಂಬುದನ್ನು ಪ್ರತ್ಯೇಕವಾಗಿ ಹೇಳಲೇಬೇಕಿಲ್ಲ. ನೀವೇ ಊಹಿಸಿ, ನನ್ನಂತಹ ರೋಗಿ ಸತ್ತರೆ ಅವರಿಗೇ ನಷ್ಟ. ಬೇಗ ಗುಣವಾದರೆ ಇನ್ನೂ ಹೆಚ್ಚು ನಷ್ಟ. ಈ ಎರಡೂ ಆಗದಂತೆ ಅತ್ಯಂತ ಜಾಗರೂಕತೆಯಿಂದ ನೋಡಿಕೊಂಡರು ಅನ್ನಿ.
  • "ನಿಮ್ಮ ತಲೆ! ನಿಮ್ಮ ದೇವರೂ ನಿಮ್ಮ ಮಟ್ಟದವನೇ ಅನ್ನಿ. ಪ್ರಾರ್ಥಿಸಿದರೆ ಮಾತ್ರವೇ ರೋಗವನ್ನು ಗುಣ ಮಾಡುವ ದೇವರಿಗೂ, ಲಂಚಕ್ಕೆ ಒಳ್ಳೆಯ ಔಷಧಿ ಕೊಡುವ ಸರಕಾರೀ ಡಾಕ್ಟರರಿಗೂ ಏನು ಸ್ವಾಮೀ ಭೇದ?"
  • ಅವಿದ್ಯಾವಂತರ ಮೌಢ್ಯ ಕ್ಷಮಾರ್ಹ-ಆದರೆ ವಿದ್ಯಾವಂತರ ಮೌಢ್ಯ?
  • ಉಲ್ಲಸಿತ ಮನಸ್ಸು, ಪ್ರಸನ್ನವಾದ ಮನಸ್ಸು, ತುಂಬು ಹೃದಯದ ನಗೆ ಉಳ್ಳವನ ಬಳಿ ಯಾವ ರೋಗವೂ ಬಾರದು. ಬಂದರೂ ಅವನಲ್ಲಿ ಎರಡು ದಿನ ಉಳಿಯಲಾರದು.
  • "ದೇವರನ್ನು ನಂಬಿದವರು  ಆಸ್ಪತ್ರೆಯ ಅಧಿಕಾರಿಗಳಿಗೆ, ಪೇದೆಗಳಿಗೆ ಲಂಚ ಏಕೆ ಸ್ವಾಮಿ ಕೊಡಬೇಕು?"
  • "ಏಕೆ? ಮುಖವನ್ನೇಕೆ ತೊಳೆಯಬೇಕು? ಹುಲಿ ಸಿಂಹ ಮುಂತಾದವು ಮುಖ ತೊಳೆಯುತ್ತವೆಯೋ?" ಎಂದು ಕೇಳಿದೆ. "ಇಲ್ಲ ಕತ್ತೆ ಎತ್ತುಗಳೂ ತೊಳೆಯುವುದಿಲ್ಲ" ಎಂದಳು.
ಮುಂದಿನ ಶುಕ್ರವಾರ ದೇವರಿಲ್ಲದ ಗುಡಿ.
ಈಗ ನನ್ನ ಮುಕ್ತಕ. ಧಾಟಿಗೆ ಒಂದು ಬಾರಿ - ಬೋರ್ಡಿನ,  ಮೇಲಿನ,  ಅಕ್ಷರ,  ಗಳಪೈಕಿ, ಹೀಗೆ ಬಿಡಿಸಿಕೊಂಡು ಓದಿ. 

ಕಣ್ಣಿನ ಡಾಕ್ಟರಲ್ಲಿ.
" ಬೋರ್ಡಿನ ಮೇಲಿನ ಅಕ್ಷರಗಳ ಪೈಕಿ 
ಎಷ್ಟೋದಬಲ್ಲಿರಿ ರಾಯ್ರೆ?
ಮೇಲಿಂದ ನೋಡಿರಿ" "ಸರಿ ಸರಿ ಗೊತ್ತಾಯ್ತು,
ಆ ಬೋರ್ಡು ಎಲ್ಲಿದೆ ಡಾಕ್ಟ್ರೆ?"