ಬುಧವಾರ, ಅಕ್ಟೋಬರ್ 17, 2012


ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
  • ಕುಡಿತವನ್ನು ಕೊಂಡಾಗ ಕಿಸೆಯಲ್ಲಿನ ಕಾಸು ಹೋಗುತ್ತದೆ. ಬೆಳಗಾದ ನಂತರ ಕುಡಿತದ ಅಮಲು ಹೋಗುತ್ತದೆ. ಅಷ್ಟಿಷ್ಟು ತಿಂದನಂತರ ಅದರ ವಾಸನೆಯೂ ಹೋಗುತ್ತದೆ. ಆದರೆ ಕುಡಿತ ಮುಖದಲ್ಲಿ ಮಾಡುವ ಗುರುತು?   `ಇವನು ಕುಡುಕ' ಎಂದು ಬೋರ್ಡು ಬರೆದು ಹಣೆಯ ಮೇಲೆ ಹಚ್ಚುತ್ತದೆ.
  • ಕೆಲವರು ಅನುಗಾಲವೂ ತಮ್ಮ ಭವಿಷ್ಯದ ಬಗ್ಗೆಯೇ ಯೋಚಿಸುತ್ತ ಕುಳಿತು ತಮ್ಮ ಇರುವಿಕೆಯನ್ನು ಹಾಳು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸದಾ ತಮ್ಮ ಗತಜೀವನವನ್ನು ನೆನೆಯುತ್ತ ಇಂದು ಎಂಬುದನ್ನೆ ಮರೆಯುತ್ತಾರೆ. ಅಂತೂ ವರ್ತಮಾನ ಕಾಲದಲ್ಲಿ ಇಬ್ಬರೂ ಇಲ್ಲ. ಇಂತಹರು ಬುದ್ಧಿವಂತ ಪಶುಗಳು.
  • ನಿನ್ನೆ ಎಂಬುದು ಹೋಯ್ತು, ನಾಳೆ ಬರುವುದು ಅನುಮಾನ, ಇಂದು ಎಂಬುದೊಂದೇ ಸತ್ಯ. ನಾನೂ ಉಮರನ ವಿಚಾರ ಸರಣಿಯವನು.
  • "ನಿಮ್ಮ ಜಾತಿ ಯಾವುದು ಎಂದು ಕೇಳಬಹುದೇ, ಮಿಸ್ಟರ್?"   "ಥುತ್! ಅಯೋಗ್ಯರ ತಲೆಯಲ್ಲಿ ಅಯೋಗ್ಯ ವಿಚಾರಗಳೇ ಬರುತ್ತದೆ. ನಿನ್ನಂತಹ ಕ್ಷುಲ್ಲಕ ಮನುಷ್ಯ ನನ್ನ ಆತ್ಮ ಚರಿತ್ರೆ ಬರೆದುಕೊಳ್ಳಲೂ ಯೋಗ್ಯನಲ್ಲ. ಹೋಗು, ಹಾಳಾಗಿ ಹೋಗು"
  • ಹುಟ್ಟಿದ ಜಾತಿಗೂ ಬದುಕಿ ಬಾಳುತ್ತಿರುವ ಜಾತಿಗೂ ಯಾವ್ಯಾವ ಸಂಬಂಧವೂ ಇಲ್ಲ.
  • ಮಾನವ ಜಾತಿ ಎಂದು ಹೇಳಿಕೊಳ್ಳುವ ಯೋಗ್ಯತೆ ಇಲ್ಲದವರೂ ಇದ್ದಾರೆ. ಪ್ರಾಯಶಃ ಅವರೇ ಹೆಚ್ಚಿದ್ದಾರೆ.
  • ಈ ಜಾತಿಯಿಂದ ಯಾರಿಗಾವ ಉಪಯೋಗವಿದೆ. ದಡ್ಡ ಜನತೆಯನ್ನು ಸ್ವಾರ್ಥಕ್ಕಾಗಿ  ಉಪಯೋಗಿಸಿಕೊಂಡು ಮತಗಳನ್ನು ನುಂಗಿ ದೊಡ್ದವರೆನಿಸಿಕೊಳ್ಳುವ ಬೆಂಕಿ ಕೋಳಿಗಳಾದ ರಾಜಕಾರಿಣಿಗಳಿಗೆ ಚುನಾವಣೆ  ಸಮಯದಲ್ಲಿ ಮಾತ್ರ ಇದರ ಉಪಯೋಗ.
ಇನ್ನು ನನ್ನದೊಂದು ಮುಕ್ತಕ.

ಮೋಸ 
" ನಿನ್ನನೆ ನಂಬಿದ ಜನರಿಗೆ ಮೋಸವ 
ಏಕೆ ಮಾಡುವುದಯ್ಯ  ನೀನು?"
" ನನ್ನನು ನಂಬದ ಜನರಿಗೆ ಮೋಸವ 
ಹೇಗೆ ಮಾಡುವುದಯ್ಯ ನಾನು?"
                                                          **********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ