ಸೋಮವಾರ, ಅಕ್ಟೋಬರ್ 1, 2012

ಬೀchi ಯವರ `ಆಟೋ' ಕಾದಂಬರಿಯಿಂದ.....
(ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)
  • ಕಂಣೀರು  ಸುರಿಸುವುದೊಂದೇ ಹೆಂಣಿನ ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳೂ ಬರೀ ಅದನ್ನೇ ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನೂ ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿಬಿಡುತ್ತಿದ್ದವು.
  • ಹೊಟ್ಟೆಯ ಹಸಿವು ಬಾಳಿನ ಯಾವ ದುಃಖಕ್ಕೂಸೊಪ್ಪು  ಹಾಕುವುದಿಲ್ಲ.
  • "ನಿನ್ನ ಕಷ್ಟ, ನಿನ್ನ ಸುಖ ನಿನ್ನವು. ನನಗೆ ಕೊಡಬೇಕಾದುದನ್ನು ಮೊದಲು ಕೊಡು." ಎನ್ನುತ್ತದೆ ಹೊಟ್ಟೆ, ಟ್ಯಾಕ್ಸ್ ಇನ್ಸ್ ಪೆಕ್ಟರನಂತೆ. ಕೊಡಬೇಕು ಅಹುದು. ಆದರೆ ಎಲ್ಲಿಂದ? ಅದು ಹೊಟ್ಟೆಗೆ ಸಂಬಂಧಿಸದ ಪ್ರಶ್ನೆ.
  • ಎಲ್ಲಿಂದ ತಂದು ಹಾಕಿದರೂ ಅದು ತಿನ್ನುತ್ತದೆ. ಅದಕ್ಕೆ ನಿಯಮ, ನಿಯತ್ತುಗಳ ಕಾಟ ಒಂದೂ ಇಲ್ಲ. ಕಳ್ಳನ ಹೊಟ್ಟೆ ಅವನ ಅನ್ನ ಬೇಡ ಎನ್ನುವುದಿಲ್ಲವಲ್ಲ? ಬೇಡ ಎನ್ನದಿರುವುದಷ್ಟೇ ಅಲ್ಲ, ಅವನನ್ನು ಕಳ್ಳತನಕ್ಕೆ ಹಚ್ಚುವುದೇ ಆ ಹೊಟ್ಟೆ. ಅದಕ್ಕೇನು? ಅವನು ಜೇಲಿನಲ್ಲಿದ್ದರೂ ಅಲ್ಲಿಯೂ ಅದನ್ನು ಯಾರೋ ತುಂಬುತ್ತಾರೆ. ಅಂತೂ ತುಂಬುತ್ತಿರಬೇಕು ಅದನ್ನು ಆಗಾಗ್ಗೆ.
  • ತಂದೆ ಒಂದು ತಪ್ಪು ಮಾಡುತ್ತಾನೆ, ಮಗನು ಅದರಿಂದ ಸಹಜವಾಗಿಯೇ ಪಾಠ ಕಲಿಯುತ್ತಾನೆ. ತತ್ಫಲವಾಗಿ ಆ ತಪ್ಪನ್ನು ಬಿಟ್ಟು ಬೇರೊಂದು ಹೊಸತನ್ನು ಇವನು ಮಾಡುತ್ತಾನೆ!
  • ಆದರ್ಶವು ತಲೆಯನ್ನೊಯ್ದು ಆಕಾಶದಲ್ಲಿಡುತ್ತದೆ. ಬಾಳು ಕಾಲನ್ನು ನೆಲಕ್ಕೆ ತಂದು ನಿಲ್ಲಿಸುತ್ತದೆ.
  • ನಾಳೆಗೆ ಅಂಜುವ ಹೇಡಿಯೊಬ್ಬನು ಬೇಡವೆಂದರೆ ಬೆಳಗಾಗದೆ ಇರಲು ಆಗುತ್ತೆಯೇ?
ಇಂದಿಗೆ ಇಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ.
ಧಾಟಿ ತಿಳಿಯಲು, ದಪ್ಪಗಾ-ಜಿನಒಂದು -ಕನ್ನಡಕ-ಕಳೆದಿದೆ-ಸಿಕ್ಕಿದ-ವರುದಯ-ಮಾಡಿ, ಪತ್ರಿಕೆ-ಯಲಿದಪ್ಪ-ದಪ್ಪಅ-ಕ್ಷರಗಳ-ಪ್ರಕಟಣೆ-ಯೊಂದನು-ನೀಡಿ  ಹೀಗೆ ಪದಚ್ಛೆeದ ಮಾಡಿಕೊಂಡು ಒಮ್ಮೆ  ಓದಿ. 
ಪ್ರಕಟಣೆ 
ದಪ್ಪ ಗಾಜಿನ ಒಂದು ಕನ್ನಡಕ ಕಳೆದಿದೆ 
ಸಿಕ್ಕಿದವರು ದಯಮಾಡಿ 
ಪತ್ರಿಕೆಯಲಿ ದಪ್ಪದಪ್ಪ ಅಕ್ಷರಗಳ 
ಪ್ರಕಟಣೆಯೊಂದನು ನೀಡಿ.  
                                                   *****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ